ಬೆಂಗಳೂರು: ದ್ವಿಚಕ್ರ ವಾಹನಗಳಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಪುಂಡರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. 33 ಪ್ರಕರಣಗಳ ದಾಖಲಿಸಿಕೊಳ್ಳಲಾಗಿದ್ದು, 44 ಯುವಕರನ್ನು ವಶಕ್ಕೆ ಪಡೆಯಲಾಗಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ವ್ಹೀಲಿಂಗ್ ಮಾಡುತ್ತಿದ್ದ 44 ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಚಿಕ್ಕಜಾಲ ಸಮೀಪ ವಿಮಾನ ನಿಲ್ದಾಣ ರಸ್ತೆಯಲ್ಲಿ ಆಗಸ್ಟ್ 15ರಂದು ಸಂಜೆ 5 ಗಂಟೆಗೆ ಯುವಕ ಗುಂಪು ದ್ವಿಚಕ್ರವಾಹನಗಳಲ್ಲಿ ವ್ಹೀಲಿಂಗ್ ಮಾಡಿದೆ.
ಅದೇ ಮಾರ್ಗವಾಗಿ ಬರುತ್ತಿದ್ದವರು ಮೊಬೈಲ್ ನಲ್ಲಿ ದೃಶ್ಯ ಸೆರಹಿಡಿದಿದ್ದಾರೆ. ಈ ವೇಳೆ ವ್ಹೀಲಿಂಗ್ ಮಾಡುತ್ತಿದ್ದ ಯುವಕನೊಬ್ಬ ಮದ್ಯದ ಬೆರಳು ತೋರಿಸಿ ಕಾರ್ ನಲ್ಲಿ ವಿಡಿಯೋ ಮಾಡುತ್ತಿದ್ದವರಿಗೆ ಬೆದರಿಕೆ ಹಾಕಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಪೊಲೀಸರು ಕಾರ್ಯ ಪ್ರವೃತ್ತರಾಗಿ 44 ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ದೇವನಹಳ್ಳಿ ಸಂಚಾರ ಠಾಣೆಯಲ್ಲಿ 9, ಯಲಹಂಕ ಠಾಣೆಯಲ್ಲಿ 6, ಹೆಬ್ಬಾಳ ಠಾಣೆಯಲ್ಲಿ 18 ಪ್ರಕರಣ ದಾಖಲಾಗಿವೆ.