ಅಫ್ಘಾನಿಸ್ತಾನಕ್ಕೆ, ಪಾಕಿಸ್ತಾನ ಕಳಪೆ ಗುಣಮಟ್ಟದ ಗೋಧಿಯನ್ನು ದಾನ ಮಾಡಿದೆ ಎಂಬ ಆರೋಪ ಕೇಳಿಬಂದಿದ್ದು, ಟ್ವಿಟರ್ ನಲ್ಲಿ ಮಾತಿನ ವಾರ್ ಶುರುವಾಗಿದೆ. ತಾಲಿಬಾನ್ ಅಧಿಕಾರಿಯೊಬ್ಬರು ಭಾರತ ಕಳುಹಿಸಿರುವ ಗೋಧಿಯನ್ನು ಶ್ಲಾಘಿಸಿ, ಪಾಕಿಸ್ತಾನ ಕಳುಹಿಸಿರುವ ಗೋಧಿಯ ಗುಣಮಟ್ಟ ತಿನ್ನಲು ಯೋಗ್ಯವಾಗಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆಂದು ವರದಿಯಾಗಿದೆ.
ಪಾಕಿಸ್ತಾನದ ಗೋಧಿಯ ಗುಣಮಟ್ಟದ ಬಗ್ಗೆ ತಾಲಿಬಾನ್ ಅಧಿಕಾರಿಯೊಬ್ಬರು ದೂರುತ್ತಿರುವ ವೀಡಿಯೊವೊಂದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಅಗಿದೆ. ತಾಲಿಬಾನ್ ಸರ್ಕಾರ ಪಾಕಿಸ್ತಾನವು, ಅಪ್ಘಾನಿಸ್ತಾನಕ್ಕೆ ಟನ್ ಗಟ್ಟಲೆ ಗೋಧಿ ಕಳುಹಿಸಿದ್ದಾರೆ, ಆದರೆ ಅದು ಸೇವಿಸಲು ಯೋಗ್ಯವಾಗಿಲ್ಲ ಎಂದು ಒಪ್ಪಿಕೊಂಡಿದೆ.
ಅಪ್ಘಾನಿಸ್ತಾನದ ಜನತೆ ಕೂಡ ಭಾರತ ಕಳುಹಿಸಿರುವ ಗೋಧಿಯ ಗುಣಮಟ್ಟವನ್ನು ಹೊಗಳಿ ಟ್ವಿಟ್ಟರ್ ನಲ್ಲಿ ಧನ್ಯವಾದ ಅರ್ಪಿಸಿದ್ದಾರೆ. “ಅಫ್ಘಾನ್ ಜನರಿಗೆ ನಿಮ್ಮ ನಿರಂತರ ಬೆಂಬಲಕ್ಕಾಗಿ ಭಾರತಕ್ಕೆ ಧನ್ಯವಾದಗಳು. ನಮ್ಮ ಸಾರ್ವಜನಿಕ ಸ್ನೇಹಿ ಸಂಬಂಧಗಳು ಶಾಶ್ವತವಾಗಿರುತ್ತವೆ. ಜೈ ಹಿಂದ್” ಎಂದು ಹಮ್ದುಲ್ಲಾ ಅರ್ಬಾಬ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
ಇನ್ನೊಬ್ಬ ಟ್ವಿಟ್ಟರ್ ಬಳಕೆದಾರ ಸಹ ಭಾರತವನ್ನು ಹೊಗಳಿದ್ದು, ಪಾಕಿಸ್ತಾನ ಕಳುಹಿಸಿರುವ ಗೋಧಿಯನ್ನು ಸೇವಿಸಲು ಸಾಧ್ಯವಿಲ್ಲ. ಅದು ಸಂಪೂರ್ಣವಾಗಿ ಹಾಳಾಗಿದೆ. ಭಾರತ ಉತ್ತಮ ಗುಣಮಟ್ಟದ ಗೋಧಿಯನ್ನು ಕಳುಹಿಸಿ ಅಪ್ಘಾನ್ ಜನರಿಗೆ ನೆರವಾಗುತ್ತಿದೆ ಎಂದಿದ್ದಾರೆ.
ವೈರಲ್ ವೀಡಿಯೋ ಪಾಕಿಸ್ತಾನದ ಪರವಾದ ಆಫ್ಘಾನ್ ಸರ್ಕಾರವನ್ನು ಕೆರಳಿಸಿದ್ದು, ಭಾರತವನ್ನು ಹೊಗಳಿ, ಪಾಕಿಸ್ತಾನದ ವಿರುದ್ಧ ಹೇಳಿಕೆ ನೀಡಿದ ತಾಲಿಬಾನ್ ಅಧಿಕಾರಿಯನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಕಳೆದ ತಿಂಗಳು, ಭಾರತವು ಆಫ್ಘಾನ್ ಜನರ ಸಹಾಯಕ್ಕಾಗಿ ಗೋಧಿಯನ್ನು ರವಾನಿಸಿತ್ತು. 2000 ಮೆಟ್ರಿಕ್ ಟನ್ ಗೋಧಿಯನ್ನು ಹೊತ್ತ ವಾಹನಗಳು ಅಮೃತಸರದ ಅಟ್ಟಾರಿಯಿಂದ ಜಲಾಲಾಬಾದ್, ಅಫ್ಘಾನಿಸ್ತಾನಕ್ಕೆ ಹೊರಟಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿತ್ತು.
ಭಾರತವು ಅಫ್ಘಾನಿಸ್ತಾನದ ಜನರೊಂದಿಗೆ ತನ್ನ ವಿಶೇಷ ಸಂಬಂಧಕ್ಕೆ ಬದ್ಧವಾಗಿದೆ ಎಂದು ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ, ಭಾರತವು 50,000 ಮೆಟ್ರಿಕ್ ಟನ್ ಗೋಧಿಯನ್ನು ಪಾಕಿಸ್ತಾನದ ಮೂಲಕ ಅಫ್ಘಾನಿಸ್ತಾನಕ್ಕೆ ಕಳುಹಿಸುವುದಾಗಿ ಘೋಷಿಸಿತ್ತು.