ಸಾಮಾಜಿಕ ಜಾಲತಾಣ ಫೇಸ್ಬುಕ್ (ಈಗ ಮೆಟಾ) ಮಾಲೀಕತ್ವದ ವಾಟ್ಸಾಪ್, ಇದೀಗ ಮಲ್ಟಿ ಡಿವೈಸ್ ವೈಶಿಷ್ಟ್ಯವನ್ನು ಹೊರತಂದಿದೆ. ಈ ಪ್ರಕಾರ ವಾಟ್ಸಾಪ್ ವೆಬ್ ಗಾಗಿ ಫೋನ್ ಅನ್ನು ಆನ್ಲೈನ್ ನಲ್ಲಿ ಇರಿಸುವ ಅಗತ್ಯವಿಲ್ಲ ಎನ್ನಲಾಗಿದೆ.
ವಾಟ್ಸಾಪ್ ಬಳಕೆದಾರರಿಗೆ ತಮ್ಮ ಖಾತೆಯನ್ನು ಬೇರೆ ಸಾಧನಗಳಿಗೆ ಲಿಂಕ್ ಮಾಡಲು ಮತ್ತು ಆನ್‌ಲೈನ್‌ನಲ್ಲಿ ಸ್ಮಾರ್ಟ್‌ಫೋನ್ ಇಲ್ಲದೆ ಸಂದೇಶ ಕಳುಹಿಸುವ ಫೀಚರ್ ಬಳಸುವ ಹೊಸ ವೈಶಿಷ್ಟ್ಯವನ್ನು ವಾಟ್ಸಾಪ್ ಪರೀಕ್ಷಿಸುತ್ತಿದೆ.
ಈ ವೈಶಿಷ್ಟ್ಯವು ಈಗ ವಾಟ್ಸಾಪ್ ನ ಆಂಡ್ರಾಯ್ಡ್ ಹಾಗೂ ಐಒಎಸ್ ಎರಡೂ ಆವೃತ್ತಿಗಳಲ್ಲಿ ಬಳಕೆದಾರರಿಗೆ ಹೊರತರುತ್ತಿದೆ. ಈ ಹೊಸ ವೈಶಿಷ್ಟ್ಯವು ವಾಟ್ಸಾಪ್ ಬಳಕೆದಾರರಿಗೆ ತಮ್ಮ ಸ್ಮಾರ್ಟ್‌ಫೋನ್ ಆನ್‌ಲೈನ್ ಇಲ್ಲದೆ ಮತ್ತೊಂದು ಉಪಕರಣದಲ್ಲಿ (ಉದಾಹರಣೆಗೆ ಕಂಪ್ಯೂಟರ್, ಅಥವಾ ವಾಟ್ಸಾಪ್ ವೆಬ್) ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಅನುಮತಿಸುತ್ತದೆ. ಇಲ್ಲಿಯವರೆಗೆ, ಬಳಕೆದಾರರು ವೆಬ್ ಆವೃತ್ತಿಯಲ್ಲಿ ಬಳಸುವ ಮೊದಲು ತಮ್ಮ ಸ್ಮಾರ್ಟ್‌ಫೋನ್ ಇಂಟರ್ನೆಟ್‌ಗೆ ಸಂಪರ್ಕಗೊಂಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗಿತ್ತು.
ಈ ಹೊಸ ಫೀಚರ್ ಇನ್ನೂ ಬೀಟಾ ಹಂತದಲ್ಲಿದೆ. ವಾಟ್ಸಾಪ್ ನಲ್ಲಿನ ಲಿಂಕ್ಡ್ ಡಿವೈಸಸ್ ಸೆಟ್ಟಿಂಗ್‌ನಿಂದ ಬೀಟಾ ಎಂದು ಲೇಬಲ್ ಮಾಡಲಾದ ವೈಶಿಷ್ಟ್ಯವನ್ನು ಬಳಕೆದಾರರು ಆಯ್ಕೆ ಮಾಡಬೇಕಾಗುತ್ತದೆ. ಈ ಬಾರಿ, ನಿಮ್ಮ ಸ್ಮಾರ್ಟ್‌ಫೋನ್ ಆನ್‌ಲೈನ್‌ನಲ್ಲಿದೆಯೇ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕಾಗಿಲ್ಲ. ಸ್ಮಾರ್ಟ್‌ಫೋನ್ ಆಫ್‌ಲೈನ್‌ಗೆ ಹೋದ ನಂತರ 14 ದಿನಗಳವರೆಗೆ ಸಂದೇಶಗಳನ್ನು ಸ್ವೀಕರಿಸಲು ಮತ್ತು ಕಳುಹಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ನಿಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಖಾಲಿಯಾಗಿದ್ರೆ, ನಿಮ್ಮ ವಾಟ್ಸಾಪ್ ವೆಬ್ ಕಾರ್ಯನಿರತವಾಗಿರುತ್ತದೆ.