ತಿರುವನಂತಪುರಂ: ಸಾಮಾಜಿಕ ಜಾಲತಾಣ ವಾಟ್ಸಾಪ್ ಗ್ರೂಪ್ ಪ್ರಮಾದಕ್ಕೆ ಅಡ್ಮಿನ್ ಹೊಣೆಯಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ವಾಟ್ಸಾಪ್ ಗ್ರೂಪ್ ಗಳಲ್ಲಿ ಸದಸ್ಯರು ಹಾಕುವ ಆಕ್ಷೇಪಾರ್ಹ ಪೋಸ್ಟ್ ಗಳನ್ನು ಹೊಣೆ ಮಾಡಲು ಆಗುವುದಿಲ್ಲ ಎಂದು ಹೇಳಲಾಗಿದೆ.
ಗ್ರೂಪ್ ಸದಸ್ಯರಿಗೂ ಅವರದೇ ಆದ ಜವಾಬ್ದಾರಿ ಇರುತ್ತದೆ. ಇದನ್ನು ಅರಿತು ವರ್ತಿಸಬೇಕು. ಆಕ್ಷೇಪಾರ್ಹ ಸಂದೇಶ ಮತ್ತು ಫೋಟೋಗಳನ್ನು ಯಾರು ಪೋಸ್ಟ್ ಮಾಡಿದರೂ ಅದು ಅಪರಾಧ ಆಗಲಿದ್ದು, ಪೋಸ್ಟ್ ಮಾಡಿದ ಸದಸ್ಯರು ನೇರ ಹೊಣೆಯಾಗುತ್ತಾರೆ ಹೊರತು ಗ್ರೂಪ್ ಅಡ್ಮಿನ್ ಅಲ್ಲವೆಂದು ಹೈಕೋರ್ಟ್ ಹೇಳಿದೆ.
ಅಪರಾಧ ಕಾನೂನು ಕೂಡ ಈ ವಿಷಯದಲ್ಲಿ ಸ್ಪಷ್ಟವಾಗಿದೆ ಎಂದು ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಕೌಸರ್ ಎಡಪಾಗತ್ ತೀರ್ಪು ಪ್ರಕಟಿಸಿದ್ದಾರೆ.
2020 ರಲ್ಲಿ ಫ್ರೆಂಡ್ಸ್ ಹೆಸರಿನ ವಾಟ್ಸಾಪ್ ಗ್ರೂಪ್ ರಚಿಸಿದ್ದು, ಇದರಲ್ಲಿ ಮೂವರು ಅಡ್ಮಿನ್ ಗಳಿದ್ದರು. ಅವರಲ್ಲಿ ಮೂರನೇ ಅಡ್ಮಿನ್ ಮಕ್ಕಳ ಬ್ಲೂಫಿಲಂ ಅಪ್ಲೋಡ್ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದ್ದು, ಗ್ರೂಪ್ ನ ಮೂರನೇ ಸದಸ್ಯನ ಜೊತೆಗೆ ಅಡ್ಮಿನ್ ಅನ್ನು ಎರಡನೇ ಆರೋಪಿ ಎಂದು ಪರಿಗಣಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ವಾಟ್ಸಾಪ್ ಗ್ರೂಪ್ ಗಳು ಸಮಾನ ಜವಾಬ್ದಾರಿ ಹೊಂದಿದ ಸದಸ್ಯರ ವೇದಿಕೆಯಾಗಿದ್ದು, ಇದರಲ್ಲಿ ಸೇವಕ, ಮಾಲೀಕರು ಎನ್ನುವುದು ಇರುವುದಿಲ್ಲ. ತಪ್ಪು ಮಾಡಿದವರೇ ಹೊಣೆಗಾರರಾಗಿರುತ್ತಾರೆ. ಅಡ್ಮಿನ್ ಎನ್ನುವ ಕಾರಣಕ್ಕೆ ಗ್ರೂಪ್ ಸದಸ್ಯರು ಮಾಡಿದ ತಪ್ಪನ್ನು ಅಪರಾಧ ಕಾನೂನಿಗೆ ವಿರುದ್ಧವಾಗಿ ಅಡ್ಮಿನ್ ಗೆ ವಹಿಸಲು ಬರುವುದಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.