ಮುಂಬೈ: ವಾಟ್ಸಾಪ್ ಗ್ರೂಪ್ ಸದಸ್ಯರ ಪೋಸ್ಟ್ ಗಳಿಗೆ ಗ್ರೂಪ್ ಅಡ್ಮಿನ್ ಹೊಣೆಯಲ್ಲ ಎಂದು ಬಾಂಬೆ ಹೈಕೋರ್ಟ್ ನಾಗಪುರ ಪೀಠ ಮಹತ್ವದ ತೀರ್ಪು ನೀಡಿದೆ.
ಬಾಂಬೆ ಹೈಕೋರ್ಟ್ ನಾಗಪುರ ಪೀಠ ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಝಡ್.ಎ. ಹಕ್ ಮತ್ತು ಎ.ಬಿ. ಬೋರ್ಕರ್ ಅವರಿದ್ದ ಪೀಠ ವಾಟ್ಸಾಪ್ ಗ್ರೂಪಿನ ಸದಸ್ಯರ ಪೋಸ್ಟ್ ಗಳಿಗೆ ಆಡ್ಮಿನ್ ಹೊಣೆಯಾಗುವುದಿಲ್ಲ ಎಂದು ತಿಳಿಸಿದೆ.
ಮಹಿಳೆಯರ ಕುರಿತಂತೆ ವಾಟ್ಸಾಪ್ ಗ್ರೂಪ್ ಸದಸ್ಯರೊಬ್ಬರು ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದು, ಗ್ರೂಪ್ ಅಡ್ಮಿನ್ ವಿರುದ್ಧ ಮಹಿಳೆಯೊಬ್ಬರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಮಹಿಳೆಯರ ಕುರಿತಾದ ಆಕ್ಷೇಪಾರ್ಹ ಪೋಸ್ಟ್ ಗ್ರೂಪ್ ನಲ್ಲಿ ಹಾಕಿದ್ದು ಅದನ್ನು ಗ್ರೂಪ್ ಅಡ್ಮಿನ್ ಡಿಲೀಟ್ ಮಾಡಿಲ್ಲ. ಅಂತಹ ಪೋಸ್ಟ್ ಹಾಕಿದ್ದ ವ್ಯಕ್ತಿಗೆ ಕ್ಷಮೆ ಕೋರಲು ಕೇಳಿರಲಿಲ್ಲ ಎಂದು ಮಹಿಳೆ ಆರೋಪಿಸಿದ್ದರು.
ಗ್ರೂಪ್ ಅಡ್ಮಿನ್ ಕಿಶೋರ್ ಟ್ಯಾರೋನ್ ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸಬೇಕೆಂದು ನಾಗಪುರ ಹೈಕೋರ್ಟ್ ಪೀಠಕ್ಕೆ ಮನವಿ ಮಾಡಿದ್ದರು. ವಿಚಾರಣೆ ಸಂದರ್ಭದಲ್ಲಿ ಕೋರ್ಟ್, ಗ್ರೂಪ್ ಅಡ್ಮಿನ್ ಗೆ ಸದಸ್ಯರನ್ನು ಸೇರಿಸುವ ಮತ್ತು ತೆಗೆದುಹಾಕುವ ಅಧಿಕಾರವಿದೆ. ಸದಸ್ಯರು ಹಾಕಿದ್ದ ಪೋಸ್ಟ್ ಅನ್ನು ಸರಿಪಡಿಸುವ, ಸೆನ್ಸಾರ್ ಮಾಡುವ ಸೌಲಭ್ಯ ಅವರಿಗೆ ಇಲ್ಲ. ಸದಸ್ಯರ ಪೋಸ್ಟ್ ಗಳಿಗೆ ಅಡ್ಮಿನ್ ಹೊಣೆಯಾಗಿಸಲು ಬರಲ್ಲವೆಂದು ಹೇಳಿದೆ. ಇಂತಹ ಪೋಸ್ಟ್ ಹಾಕಿದ ಸದಸ್ಯನ ವಿರುದ್ಧ ಪ್ರಕರಣ ದಾಖಲಿಸಬಹುದು ಎಂದು ಅಭಿಪ್ರಾಯಪಟ್ಟಿದೆ.