ಕಾರ್ತಿಕ ಪೂರ್ಣಿಮೆಯ ಶುಭ ಸಂದರ್ಭದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಮೂರು ಹೊಸ ಕೃಷಿ ತಿದ್ದುಪಡಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಕಳೆದ ಒಂದು ವರ್ಷದಿಂದ ದೆಹಲಿಯ ಗಡಿಯಲ್ಲಿ ರೈತರು ಆಂದೋಲನ ನಡೆಸುತ್ತಿದ್ದರು. ಆ ಮೂರು ಕೃಷಿ ಕಾನೂನುಗಳ ವಿವರ ಇಲ್ಲಿದೆ.
ಮೊದಲ ಕೃಷಿ ಕಾನೂನು : ಕೃಷಿ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಮಸೂದೆ 2020 – ಇದರ ಪ್ರಕಾರ, ರೈತರು ತಮ್ಮ ಬೆಳೆಗಳನ್ನು ಬಯಸಿದ ಸ್ಥಳದಲ್ಲಿ ಮಾರಾಟ ಮಾಡಬಹುದಾಗಿತ್ತು. ಇಷ್ಟು ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲಿಯೂ ಯಾವುದೇ ಅಡೆತಡೆಯಿಲ್ಲದೆ ಬೆಳೆಗಳನ್ನು ಮಾರಾಟ ಮಾಡಬಹುದಿತ್ತು. ಪರವಾನಗಿ ಪಡೆದ ವ್ಯಾಪಾರಿ, ರೈತರಿಂದ ಉತ್ಪನ್ನಗಳನ್ನು ಪರಸ್ಪರ ಒಪ್ಪಿಗೆ ಬೆಲೆಗೆ ಖರೀದಿಸಬಹುದಿತ್ತು. ರಾಜ್ಯ ಸರ್ಕಾರಗಳು ವಿಧಿಸುವ ಮಾರುಕಟ್ಟೆ ತೆರಿಗೆಯಿಂದ ವಿನಾಯಿತಿ ನೀಡಲಾಗಿತ್ತು.
ಎರಡನೇ ಕೃಷಿ ಕಾನೂನು : ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ 2020 – ಸಂಸ್ಕರಣ ಘಟಕಗಳು, ಸಗಟು ವ್ಯಾಪಾರಿಗಳು, ರಫ್ತುದಾರರು ಇತ್ಯಾದಿಗಳೊಂದಿಗೆ ತೊಡಗಿಸಿಕೊಳ್ಳಲು ರೈತರಿಗೆ ಅಧಿಕಾರ ನೀಡುತ್ತದೆ. ಬೆಳೆಗಳನ್ನು ಬಿತ್ತನೆ ಮಾಡುವ ಮೊದಲೇ ರೈತರಿಗೆ ಬೆಲೆ ಭರವಸೆ ನೀಡಲಾಗುತ್ತಿತ್ತು. ಮುಂಚೆಯೇ ಬೆಲೆ ನಿರ್ಣಯವಾದ್ರೆ, ಮಾರುಕಟ್ಟೆ ಬೆಲೆಗಳ ಏರಿಕೆ ಮತ್ತು ಕುಸಿತದಿಂದ ರೈತರಿಗೆ ರಕ್ಷಣೆ ಸಿಗುತ್ತದೆ. ಇದು ಆಧುನಿಕ ತಂತ್ರಜ್ಞಾನ, ಉತ್ತಮ ಬೀಜ ಮತ್ತು ಇತರ ಸೌಲಭ್ಯಗಳನ್ನು ಪಡೆಯಲು ರೈತನಿಗೆ ಅನುವು ಮಾಡಿಕೊಡುತ್ತದೆ. ಇದು ಮಾರುಕಟ್ಟೆ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ರೈತರ ಆದಾಯವನ್ನು ಹೆಚ್ಚಿಸುತ್ತದೆ.
ಮೂರನೇ ಕಾನೂನು : ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ – ಈ ಕಾನೂನಿನ ಅಡಿಯಲ್ಲಿ ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ ವ್ಯಾಪಾರಕ್ಕಾಗಿ ಆಹಾರ ಧಾನ್ಯಗಳು, ಬೇಳೆಕಾಳುಗಳು, ಖಾದ್ಯ ತೈಲ ಮತ್ತು ಈರುಳ್ಳಿಯಂತಹ ಸರಕುಗಳಿಂದ ದಾಸ್ತಾನು ಮಿತಿಯನ್ನು ತೆಗೆದುಹಾಕಲಾಗಿತ್ತು.
ಈ ಮೂರು ಹೊಸ ಕೃಷಿ ಕಾನೂನುಗಳನ್ನು ಸೆಪ್ಟೆಂಬರ್ 17, 2020 ರಂದು ಸಂಸತ್ತಿನಲ್ಲಿ ಅಂಗೀಕರಿಸಲಾಗಿತ್ತು. ಅಂದಿನಿಂದ ರೈತ ಸಂಘಟನೆಗಳು ಪ್ರತಿಭಟನೆ ಶುರು ಮಾಡಿದ್ದವು. ಈ ಕಾನೂನನ್ನು ಹಿಂಪಡೆಯಬೇಕೆಂದು ನಿರಂತರ ಆಗ್ರಹ ಕೇಳಿ ಬರುತ್ತಿತ್ತು.
ಈ ಕಾನೂನಿನ ಮೂಲಕ ಸರ್ಕಾರವು ಕನಿಷ್ಠ ಬೆಂಬಲ ಬೆಲೆಯನ್ನು ರದ್ದುಪಡಿಸಿ, ಕೈಗಾರಿಕೋದ್ಯಮಿಗಳ ಪರ ಕೆಲಸ ಮಾಡ್ತಿದೆ ಎಂದು ರೈತ ಸಂಘಟನೆಗಳು ವಾದಿಸಿದವು. ಆದರೆ, ಈ ಕಾನೂನುಗಳ ಮೂಲಕ ಕೃಷಿ ವಲಯದಲ್ಲಿ ಹೊಸ ಹೂಡಿಕೆ ಅವಕಾಶಗಳನ್ನು ಸೃಷ್ಟಿಸಲಾಗುತ್ತದೆ ಮತ್ತು ರೈತರ ಆದಾಯವು ಹೆಚ್ಚಾಗುತ್ತದೆ ಎಂದು ಸರ್ಕಾರ ವಾದಿಸಿತು. ಸರಕಾರದೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದರೂ ಈ ಬಗ್ಗೆ ಒಪ್ಪಂದಕ್ಕೆ ಬರಲಾಗಲಿಲ್ಲ.