ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾಗಿದೆ. ಇದೊಂದು ವೈರಲ್ ಜ್ವರ, ಈಡಿಸ್ ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಡೆಂಗ್ಯೂ ಸೋಂಕಿಗೆ ಒಳಗಾದ ನಂತರ ತೀವ್ರ ಜ್ವರ, ತಲೆನೋವು, ಸ್ನಾಯು ಮತ್ತು ಕೀಲುಗಳಲ್ಲಿ ನೋವು ಇರುತ್ತದೆ. ಕೆಲವೊಮ್ಮೆ ಡೆಂಗ್ಯೂ ಮಾರಣಾಂತಿಕವಾಗಬಹುದು.
ಡೆಂಗ್ಯೂ ಜ್ವರಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲವಾದರೂ ಆರೋಗ್ಯಕರ ಆಹಾರವನ್ನು ಸೇವಿಸುವ ಮೂಲಕ ಇದು ಗಂಭೀರ ಸ್ವರೂಪ ಪಡೆಯದಂತೆ ತಡೆಯಬಹುದು. ಡೆಂಗ್ಯೂ ಪೀಡಿತರ ಡಯಟ್ ಯಾವ ರೀತಿ ಇರಬೇಕು ಅನ್ನೋದನ್ನು ನೋಡೋಣ.
ಪಪ್ಪಾಯಿ ಎಲೆಯ ರಸ – ಡೆಂಗ್ಯೂ ಜ್ವರದ ಸಂದರ್ಭದಲ್ಲಿ ಪಪ್ಪಾಯಿ ಎಲೆಗಳ ರಸವನ್ನು ಕುಡಿಯುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಪಪ್ಪಾಯಿ ಎಲೆಗಳು ಚೈಮೊಪಪೈನ್ ಮತ್ತು ಪಪೈನ್ ಎಂಬ ಕಿಣ್ವಗಳನ್ನು ಹೊಂದಿರುತ್ತವೆ. ಇದು ರಕ್ತದ ಪ್ಲೇಟ್‌ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಡೆಂಗ್ಯೂನಿಂದ ಬಳಲುತ್ತಿರುವ ವ್ಯಕ್ತಿಯು ಪಪ್ಪಾಯಿ ಎಲೆಗಳ ರಸವನ್ನು ಕುಡಿಯಲು ಸೂಚಿಸಲಾಗುತ್ತದೆ.
ಎಳನೀರು – ಡೆಂಗ್ಯೂ ಪೀಡಿತರು ಎಳನೀರು ಸೇವನೆ ಮಾಡಬೇಕು. ಇದರಲ್ಲಿ ಎಂಟಿಒಕ್ಸಿಡೆಂಟ್‌ಗಳು, ಅಮೈನೋ ಆಮ್ಲಗಳು, ಕಿಣ್ವಗಳು, ವಿಟಮಿನ್ ಸಿ ಮುಂತಾದ ಅನೇಕ ಪೋಷಕಾಂಶಗಳಿವೆ. ಇದು ದೇಹವನ್ನು ಹೈಡ್ರೀಕರಿಸುವಲ್ಲಿ ಸಹಾಯ ಮಾಡುತ್ತದೆ. ಡೆಂಗ್ಯೂ ಜ್ವರವು ದೇಹದಲ್ಲಿ ದೌರ್ಬಲ್ಯವನ್ನು ಉಂಟುಮಾಡುತ್ತದೆ. ಹಾಗಾಗಿ ಎಳನೀರು ಕುಡಿಯುವುದರಿಂದ ದೇಹಕ್ಕೆ ಚೈತನ್ಯ ಬರುತ್ತದೆ.
ಅರಿಶಿನ – ತಜ್ಞರ ಪ್ರಕಾರ ಡೆಂಗ್ಯೂ ರೋಗಿಗಳು ಅರಿಶಿನವನ್ನು ಸೇವಿಸಬೇಕು. ಇದರಲ್ಲಿ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕಂಡುಬರುತ್ತವೆ. ಇವು ಚಯಾಪಚಯ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತವೆ. ರಾತ್ರಿ ಮಲಗುವ ಮುನ್ನ ಅರಿಶಿನದ ಹಾಲನ್ನು ಕುಡಿಯುವುದು ಡೆಂಗ್ಯೂ ನಿವಾರಣೆಗೆ ಪ್ರಯೋಜನಕಾರಿ.
ಸಿಟ್ರಸ್ ಹಣ್ಣುಗಳು – ಡೆಂಗ್ಯೂ ಜ್ವರವಿದ್ದಾಗ ಕಿವಿ, ಕಿತ್ತಳೆ ಮುಂತಾದ ಹುಳಿ ಹಣ್ಣುಗಳನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ಇದರ ಸೇವನೆಯು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಈ ಹಣ್ಣುಗಳನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು ಮತ್ತು ಡೆಂಗ್ಯೂನಿಂದ ಬೇಗನೆ ಚೇತರಿಸಿಕೊಳ್ಳಬಹುದು.
ಡೆಂಗ್ಯೂ ಜ್ವರವಿದ್ದಾಗ ಇವುಗಳ ಸೇವನೆ ಬೇಡ…!
ಡೆಂಗ್ಯೂ ರೋಗಿಗಳು ಚಹಾ, ಕಾಫಿ, ಸೋಡಾ ಅಥವಾ ತಂಪು ಪಾನೀಯಗಳಂತಹ ವಸ್ತುಗಳಿಂದ ದೂರವಿರಬೇಕು. ಇದು ನಿರ್ಜಲೀಕರಣದ ಸಮಸ್ಯೆಯನ್ನು ಉಂಟುಮಾಡಬಹುದು.
ಡೆಂಗ್ಯೂ ಪೀಡಿತರು ಮಸಾಲೆಯುಕ್ತ ಆಹಾರದಿಂದ ದೂರವಿರಬೇಕು. ಇದನ್ನು ಸೇವಿಸುವುದರಿಂದ ಅಸಿಡಿಟಿ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತವೆ. ಜ್ವರದಿಂದ ಚೇತರಿಸಿಕೊಳ್ಳುವಲ್ಲಿಯೂ ಸಮಸ್ಯೆಯಾಗುತ್ತದೆ.
ಡೆಂಗ್ಯೂ ರೋಗಿಗಳಿಗೆ ಕರಿದ ಆಹಾರ ಪದಾರ್ಥಗಳನ್ನು ನೀಡಬಾರದು. ಇದು ಕೊಬ್ಬನ್ನು ಹೆಚ್ಚಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ.