ಪ್ರಜ್ಞೆ ಕಳೆದುಕೊಳ್ಳದೆ ಆಳವಾದ ನಿದ್ದೆಗೆ ಜಾರುವುದೇ ಯೋಗ ನಿದ್ರಾ. ಯೋಗ ನಿದ್ರಾ ಸಮಯದಲ್ಲಿ ದೇಹ ಹೆಚ್ಚು ಪುನಶ್ಚೈತನ್ಯಕಾರಿ ಹಾಗೂ ಚಿಕಿತ್ಸಾ ಸ್ಥಿತಿಗೆ ತೆರಳುತ್ತದೆ. ಇದಕ್ಕೆ ಕಾರಣ ಮೆದುಳಿನ ತರಂಗಗಳು ಬೀಟಾದಿಂದ ಆಲ್ಫಾಗೆ ಬದಲಾಗುತ್ತವೆ. ಮನಸ್ಸು ಕೂಡ ಚಟುವಟಿಕೆಯಿಂದ ಧ್ಯಾನದೆಡೆಗೆ ಸಾಗಿ ಅತ್ಯಂತ ಶಾಂತ ಸ್ಥಿತಿಗೆ ತಲುಪುತ್ತದೆ.
ವಿಶ್ರಾಂತಿಯ ಜೊತೆಗೆ ಯೋಗನಿದ್ರಾ ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ. ಹತಾಶೆ, ನಿದ್ರಾಹೀನತೆ, ಸ್ನಾಯುಬಿಗಿತ, ಭಾವನಾತ್ಮಕ ಹಾಗೂ ಮಾನಸಿಕ ಉದ್ವಿಗ್ನತೆ ಎಲ್ಲವನ್ನೂ ಕಡಿಮೆ ಮಾಡಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.
ಯೋಗ ನಿದ್ರಾ ಮಾಡಲು ಉತ್ತಮ ಮಾರ್ಗ ಅಂದ್ರೆ ಶವಾಸನದಲ್ಲಿ ಮಲಗುವುದು. ನಿಮ್ಮನ್ನು ಬೆಚ್ಚಗಿಡಬಲ್ಲ ಬ್ಲಾಂಕೆಟ್ ಒಂದನ್ನು ಕೂಡ ನೀವು ಬಳಸಬಹುದು. ತಲೆದಿಂಬು ಹಾಗೂ ಮಂಡಿಗಳ ಕೆಳಗೆ ಕೂಡ ಕೊಂಚ ಎತ್ತರವಾಗುವಂತೆ ಏನನ್ನಾದರೂ ಇಟ್ಟುಕೊಳ್ಳಬಹುದು. ಸಾಮಾನ್ಯವಾಗಿ ಯೋಗ ನಿದ್ರಾವನ್ನು ಶಿಕ್ಷಕರು ಅಥವಾ ಯೋಗಗುರುಗಳ ಸೂಚನೆಯಂತೆ ಮಾಡಲಾಗುತ್ತದೆ. ಅವರ ಸೂಚನೆಗಳಂತೆ ನಿಮ್ಮ ದೇಹವನ್ನು ವಿಶ್ರಾಂತ ಸ್ಥಿತಿಯತ್ತ ನೀವು ಕೊಂಡೊಯ್ಯಬೇಕು.
ನೀವು ಇಹಲೋಕದ ಪರಿವೆಯಿಲ್ಲದೆ ನಿದ್ರಿಸುವುದು ಯೋಗ ನಿದ್ರಾ ಅಲ್ಲ. ಸಂಪೂರ್ಣ ಪ್ರಜ್ಞೆ ಇಟ್ಟುಕೊಂಡೇ ನಿದ್ದೆಗೆ ಜಾರುವುದೇ ಯೋಗ ನಿದ್ರಾ. ಇದರಿಂದ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಣೆಯಾಗುತ್ತದೆ.