ಸಂಸತ್ತಿನಲ್ಲಿ 2024-25ರ ಹಣಕಾಸು ವರ್ಷದ ಮಧ್ಯಂತರ ಬಜೆಟ್ ಮಂಡನೆಯಾಗಿದೆ. ಈ ಸಂದರ್ಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬ್ಲೂ ಎಕಾನಮಿ ಬಗ್ಗೆ ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ. ಕರಾವಳಿ, ಸಾಗರ ಮತ್ತು ಜಲಚರ ಉತ್ಪನ್ನಗಳನ್ನು ಉತ್ತೇಜಿಸಲು ಮತ್ತು ಬಲಪಡಿಸಲು ಸಮಗ್ರ, ಬಹು-ವಲಯ ವಿಧಾನದೊಂದಿಗೆ ಯೋಜನೆಗಳನ್ನು ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದಾರೆ.
ಬ್ಲೂ ಎಕಾನಮಿ 2.0 ಗೆ ಸಹಾಯ ಮಾಡಲು ಮತ್ತು ಅದನ್ನು ವೇಗವಾಗಿ ವಿಸ್ತರಿಸಲು ಹವಾಮಾನ ಸಂಬಂಧಿತ ಚಟುವಟಿಕೆಗಳನ್ನು ಸಹ ಹೊಂದಿಕೊಳ್ಳುವಂತೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಹಾಗಿದ್ದರೆ ಬ್ಲೂ ಎಕಾನಮಿ ಎಂದರೇನು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅದರ ಆವೃತ್ತಿ 2.0 ಮೂಲಕ ಹಣಕಾಸು ಸಚಿವೆ ಏನು ಹೇಳಲು ಬಯಸುತ್ತಾರೆ? ಇದು ನೆರೆಯ ರಾಷ್ಟ್ರಗಳಾದ ಚೀನಾ ಮತ್ತು ಮಾಲ್ಡೀವ್ಸ್‌ಗೆ ಏಕೆ ಆಘಾತ ನೀಡಲಿದೆ ಎಂಬುದನ್ನೆಲ್ಲ ವಿವರವಾಗಿ ನೋಡೋಣ.
ಬ್ಲೂ ಎಕಾನಮಿ ಎಂದರೇನು ?
ವಿಶ್ವಬ್ಯಾಂಕ್ ಪ್ರಕಾರ, ಸಾಗರ ಪರಿಸರ ವ್ಯವಸ್ಥೆಗಳ ಸುತ್ತ ಆಧಾರಿತವಾದ ಆರ್ಥಿಕ ಚಟುವಟಿಕೆಗಳು ಮತ್ತು ವ್ಯಾಪಾರ ವ್ಯವಸ್ಥೆಗಳೇ ‘ಬ್ಲೂ ಎಕಾನಮಿ’. ಉತ್ತಮ ಜೀವನೋಪಾಯ ಮತ್ತು ಉದ್ಯೋಗಗಳನ್ನು ಸೃಷ್ಟಿಸಲು ಸಮುದ್ರ ಸಂಪನ್ಮೂಲಗಳ ಸುಸ್ಥಿರ ಬಳಕೆಯನ್ನು ಸಹ ಇದು ಒಳಗೊಂಡಿದೆ.
ಬ್ಲೂ ಎಕಾನಮಿ ಎಂದರೆ ಮೀನುಗಾರಿಕೆ, ತೈಲ ಮತ್ತು ಖನಿಜ ಉತ್ಪಾದನೆ, ಹಡಗು ಮತ್ತು ಕಡಲ ವ್ಯಾಪಾರ, ಬಂದರುಗಳಲ್ಲಿ ನಡೆಸುವ ಚಟುವಟಿಕೆಗಳು, ಪ್ರವಾಸೋದ್ಯಮದಂತಹ ಆರ್ಥಿಕ ಚಟುವಟಿಕೆಗಳು.
ಜಾಗತಿಕ ಆರ್ಥಿಕತೆಯಲ್ಲಿ ಬ್ಲೂ ಎಕಾನಮಿ ಕೊಡುಗೆಯೇನು ?
ಪ್ರತಿ ವರ್ಷ ಜಾಗತಿಕ ಆರ್ಥಿಕತೆಗೆ ಸುಮಾರು 1.5 ಟ್ರಿಲಿಯನ್ ಡಾಲರ್‌ಗಳಷ್ಟನ್ನು ಸಾಗರ ಆಧಾರಿತ ಚಟುವಟಿಕೆಗಳ ಮೂಲಕ ಅಂದರೆ ಬ್ಲೂ ಎಕಾನಮಿ ಮೂಲಕ ನೀಡಲಾಗುತ್ತದೆ. ಇದರಲ್ಲಿ ಹೆಚ್ಚಿನ ಪಾಲು ಕಡಲ ವ್ಯಾಪಾರದಿಂದ ಬಂದಿದೆ. ಪ್ರಪಂಚದ ಶೇ.80ರಷ್ಟು ವ್ಯಾಪಾರವು ಸಮುದ್ರದ ಮೂಲಕ ನಡೆಯುತ್ತದೆ. ಇದರ ನಂತರದಲ್ಲಿ ಮೀನಿನ ಕೃಷಿಯಿದ್ದು, ಪ್ರಪಂಚದಾದ್ಯಂತ 35 ಕೋಟಿ ಜನರ ಜೀವನೋಪಾಯವು ಮೀನುಗಾರಿಕೆಯನ್ನು ಅವಲಂಬಿಸಿದೆ.
ಕಡಲಾಚೆಯ ಪ್ರದೇಶಗಳಲ್ಲಿ ತೈಲ ಉತ್ಪಾದನೆ ಕೂಡ ಬ್ಲೂ ಎಕಾನಮಿಯ ಒಂದು ಭಾಗ. ಪ್ರಪಂಚದ ಒಟ್ಟು ಕಚ್ಚಾ ತೈಲ ಉತ್ಪಾದನೆಯ ಸುಮಾರು 34 ಪ್ರತಿಶತ ಸಮುದ್ರದ ಕಡಲಾಚೆಯ ಪ್ರದೇಶಗಳಿಂದ ಬರುತ್ತದೆ. ಜಾಗತಿಕ ಮಟ್ಟದಲ್ಲಿ ಬ್ಲೂ ಎಕಾನಮಿಯ ಒಟ್ಟು ಮೌಲ್ಯ 24 ಟ್ರಿಲಿಯನ್ ಡಾಲರ್‌ಗಿಂತಲೂ ಹೆಚ್ಚು.
ಪ್ರಪಂಚದ ಇತರ ದೇಶಗಳಂತೆ ಭಾರತವೂ ಬ್ಲೂ ಎಕಾನಮಿ ಬಗ್ಗೆ ಹೆಚ್ಚು ಆಸ್ಥೆ ವಹಿಸುತ್ತಿದೆ. ಪ್ರಸ್ತುತ ಬ್ಲೂ ಎಕಾನಮಿ ದೇಶದ ಒಟ್ಟು ಜಿಡಿಪಿಗೆ ಶೇ.4 ರಷ್ಟು ಕೊಡುಗೆ ನೀಡುತ್ತದೆ.
ವಿಶ್ವದ ಅತಿ ಉದ್ದದ ಕರಾವಳಿಯನ್ನು ಹೊಂದಿರುವ ಭಾರತದಲ್ಲಿ ಸಾಗರ ಆಧಾರಿತ ಪ್ರವಾಸೋದ್ಯಮಕ್ಕೂ ಸಾಕಷ್ಟು ಅವಕಾಶವಿದೆ. ದೇಶದ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು, ನಿರುದ್ಯೋಗವನ್ನು ಕಡಿಮೆ ಮಾಡಲು, ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಬಡತನವನ್ನು ನಿಭಾಯಿಸಲು ಇದೊಂದು ಉತ್ತಮ ಅವಕಾಶ.
ಬ್ಲೂ ಎಕಾನಮಿ 2.0 ಚೀನಾ ಮತ್ತು ಮಾಲ್ಡೀವ್ಸ್‌ಗೆ ಮಾರಕ ಏಕೆ ?
ಬ್ಲೂ ಎಕಾನಮಿ ಅಡಿಯಲ್ಲಿ ಹವಳದ ಬಂಡೆಯ ದೇಶಗಳಲ್ಲಿ ಕರಾವಳಿ ಪ್ರವಾಸೋದ್ಯಮವು ಪ್ರತಿ ವರ್ಷ ವಿಶ್ವಾದ್ಯಂತ 6 ಬಿಲಿಯನ್ ಡಾಲರ್ ಗಳಿಸುತ್ತದೆ. ಇವುಗಳಲ್ಲಿ ಚೀನಾದ ದ್ವೀಪಗಳಲ್ಲದೆ ಮಾಲ್ಡೀವ್ಸ್ ಹೆಸರೂ ಸೇರಿದೆ. ಚೀನಾ ನೆರೆಯ ದೇಶಗಳ ಭೂಮಿ ಮತ್ತು ಸಮುದ್ರಗಳನ್ನು ಆಕ್ರಮಿಸಿಕೊಂಡು ತನ್ನ ಕಾರ್ಯತಂತ್ರದ ನೆಲೆಯನ್ನು ಸ್ಥಾಪಿಸಲು ಬಹಳ ಹಿಂದಿನಿಂದಲೂ ಹವಣಿಸುತ್ತಿದೆ.
ಇತ್ತೀಚೆಗೆ ಭಾರತದೊಂದಿಗಿನ ರಾಜತಾಂತ್ರಿಕ ವಿವಾದದ ನಡುವೆ ಮಾಲ್ಡೀವ್ಸ್‌ನ ಹೊಸ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಚೀನಾಕ್ಕೆ ಹೋಗಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾದರು. ಚೀನಾ ಮತ್ತು ಮಾಲ್ಡೀವ್ಸ್ ಪ್ರವಾಸೋದ್ಯಮದಲ್ಲಿ ಸಹಕಾರ ಸೇರಿದಂತೆ 20 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ್ದವು. ಇವುಗಳಲ್ಲಿ ಬ್ಲೂ ಎಕಾನಮಿ ಉತ್ತೇಜನವೂ ಸೇರಿದೆ.
ಮಧ್ಯಂತರ ಬಜೆಟ್‌ನಲ್ಲಿ, ಭಾರತ-ಮಧ್ಯಪ್ರಾಚ್ಯ-ಯುರೋಪ್ ಕಾರಿಡಾರ್ ಜೊತೆಗೆ ಬ್ಲೂ ಎಕಾನಮಿ 2.0 ಪ್ರಚಾರವನ್ನು ಹಣಕಾಸು ಸಚಿವರು ಪ್ರಸ್ತಾಪಿಸಿದ್ದಾರೆ. ಇದು ಚೀನಾ ಮತ್ತು ಮಾಲ್ಡೀವ್ಸ್‌ನ ನಿದ್ದೆಗೆಡಿಸಿದೆ. ಪ್ರಧಾನಿ ಮೋದಿ ಅವರ ಲಕ್ಷದ್ವೀಪ ಭೇಟಿಯ ನಂತರ ಅಲ್ಲಿ ಪ್ರವಾಸೋದ್ಯಮ ಹೆಚ್ಚಿದೆ. ನಿರ್ಮಲಾ ಸೀತಾರಾಮನ್ ಕೂಡ ಬ್ಲೂ ಎಕಾನಮಿ ಅಡಿಯಲ್ಲಿ ಲಕ್ಷದ್ವೀಪದಲ್ಲಿ ಮೂಲಸೌಕರ್ಯ ಹೆಚ್ಚಿಸುವ ಬಗ್ಗೆ ಮಾತನಾಡಿದ್ದಾರೆ.