ಆರೋಗ್ಯವಾಗಿ, ಫಿಟ್ ಆಗಿರಲು ಪ್ರತಿದಿನ ವ್ಯಾಯಾಮ ಮಾಡುವುದು ಮುಖ್ಯ. ಇದು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದೆ. ಆದರೆ ವ್ಯಾಯಾಮ ಮಾಡಲು ಉತ್ತಮ ಸಮಯ ಯಾವುದು ಎಂಬುದು ಅನೇಕರಿಗೆ ತಿಳಿದಿಲ್ಲ. ಯಾವ ಸಮಯದಲ್ಲಿ ವ್ಯಾಯಾಮ ಮಾಡಿದರೆ ಹೆಚ್ಚು ಪ್ರಯೋಜನ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳಬೇಕು.
ವೈಯಕ್ತಿಕ ಆಯ್ಕೆ…
ವ್ಯಾಯಾಮ ಮಾಡಲು ಸಮಯದ ಆಯ್ಕೆ ವೈಯಕ್ತಿಕವಾಗಿದೆ. ವೈಯಕ್ತಿಕ ಆದ್ಯತೆಗಳು, ದಿನಚರಿ ಮತ್ತು ಫಿಟ್‌ನೆಸ್ ಟಾರ್ಗೆಟ್ ಅನ್ನು ಇದು ಅವಲಂಬಿಸಿದೆ.
ಬೆಳಗಿನ ವ್ಯಾಯಾಮದ ಪ್ರಯೋಜನಗಳು…
ಬೆಳಗ್ಗೆ ವ್ಯಾಯಾಮ ಮಾಡುವುದರಿಂದ ಮಾನಸಿಕ ಸ್ಪಷ್ಟತೆ ಮತ್ತು ಮನಸ್ಥಿತಿ ಸುಧಾರಿಸುತ್ತದೆ. ಇದು ಎಂಡಾರ್ಫಿನ್ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ. ಇದರಿಂದ ದಿನವಿಡೀ ಮನಸ್ಸು ಉಲ್ಲಾಸಭರಿತವಾಗುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ. ಬೆಳಗಿನ ವ್ಯಾಯಾಮವು ಉತ್ತಮ ನಿದ್ರೆಯ ಮಾದರಿಗಳನ್ನು ಉತ್ತೇಜಿಸುತ್ತದೆ. ಬೆಳಗಿನ ದೈಹಿಕ ಚಟುವಟಿಕೆಯು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.
ಮುಂಜಾನೆ ವ್ಯಾಯಾಮ ಮಾಡುವುದು ಸವಾಲಿನ ಕೆಲಸ. ಅನೇಕರಿಗೆ ಬೆಳಗ್ಗೆ ಬೇಗ ಏಳುವ ಅಭ್ಯಾಸವೇ ಇರುವುದಿಲ್ಲ. ಆದರೆ ಬೆಳಗ್ಗೆ ದೇಹದ ಉಷ್ಣತೆ ಮತ್ತು ನಮ್ಯತೆ ಕಡಿಮೆಯಾಗಿರುತ್ತದೆ, ವಾರ್ಮ್‌ಅಪ್ ಬಳಿಕ ವ್ಯಾಯಾಮವನ್ನು ಪ್ರಾರಂಭಿಸಬೇಕು.
ಮಧ್ಯಾಹ್ನವೂ ಮಾಡಬಹುದು ವ್ಯಾಯಾಮ…
ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯೊಳಗೆ ಸಹ ವ್ಯಾಯಾಮ ಮಾಡಬಹುದು. ಇದು ದೇಹದ ನೈಸರ್ಗಿಕ ಲಯವನ್ನು ಕಾಪಾಡುತ್ತದೆ. ಸಂಶೋಧನೆಯ ಪ್ರಕಾರ ದೇಹದ ಉಷ್ಣತೆ ಮತ್ತು ಸ್ನಾಯುವಿನ ಕಾರ್ಯವು ಮಧ್ಯಾಹ್ನ ಸುಧಾರಿಸುತ್ತದೆ. ಮಧ್ಯಾಹ್ನದ ವ್ಯಾಯಾಮ ದೈಹಿಕ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಮತ್ತು ಗಾಯದ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಸಮಯದಲ್ಲಿ ಸ್ನಾಯುಗಳು ಬೆಚ್ಚಗಿರುತ್ತವೆ, ಹೆಚ್ಚು ಹೊಂದಿಕೊಳ್ಳುತ್ತವೆ.
ಮಧ್ಯಾಹ್ನ ವ್ಯಾಯಾಮ ಮಾಡಲು ಯಾವುದೇ ತೊಂದರೆ ಇಲ್ಲ. ಆದರೆ ಮಧ್ಯಾಹ್ನ ಕೆಲಸದ ಒತ್ತಡ ಹೆಚ್ಚಾಗಿರುವುದರಿಂದ ವ್ಯಾಯಾಮಕ್ಕೆ ಸಮಯ ಹೊಂದಿಸಿಕೊಳ್ಳುವುದು ಕಷ್ಟವಾಗಬಹುದು. ಕೆಲಸ, ಕೌಟುಂಬಿಕ ಬದ್ಧತೆಗಳು ಅಥವಾ ಸಾಮಾಜಿಕ ಹೊಣೆಗಾರಿಕೆಗಳು ವ್ಯಾಯಾಮಕ್ಕೆ ಸಮಯದ ಲಭ್ಯತೆಗೆ ಅಡ್ಡಿಯಾಗಬಹುದು.
ಸಂಜೆಯ ವ್ಯಾಯಾಮದ ಪ್ರಯೋಜನಗಳು…
ಸಂಜೆ ವ್ಯಾಯಾಮ ಮಾಡುವುದು ದಿನದ ಒತ್ತಡವನ್ನು ನಿವಾರಿಸಲು ಉತ್ತಮ ಮಾರ್ಗವಾಗಿದೆ. ತಡವಾಗಿ ವ್ಯಾಯಾಮ ಮಾಡಲು ಇಷ್ಟಪಡುವವರಿಗೆ ಸಂಜೆಯ ಸಮಯ ಉತ್ತಮ.
ಸಂಜೆ ವ್ಯಾಯಾಮ ಮಾಡುವುದರಿಂದ ಕಾರ್ಯಕ್ಷಮತೆಯನ್ನು ಸುಧಾರಿಸಬಹುದು. ಶಕ್ತಿ, ಸಹಿಷ್ಣುತೆ ಮತ್ತು ಏರೋಬಿಕ್ ಚಟುವಟಿಕೆಯು ಸಾಯಂಕಾಲದಲ್ಲಿ ಹೆಚ್ಚಾಗಬಹುದು ಎಂದು ಅಧ್ಯಯನಗಳು ತೋರಿಸುತ್ತವೆ.
ಆದರೆ ಮಲಗುವ ಮುನ್ನ ಅಥವಾ ಆ ಸಮಯದಲ್ಲಿ ವ್ಯಾಯಾಮ ಮಾಡುವುದು ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಮಲಗುವ ಕನಿಷ್ಠ 1-2 ಗಂಟೆಗಳ ಮೊದಲು ವ್ಯಾಯಾಮವನ್ನು ಮುಗಿಸಿಕೊಳ್ಳಿ. ಕೆಲವರಿಗೆ ದಿನವಿಡೀ ಕೆಲಸ ಮಾಡಿದ ನಂತರ ಸಂಜೆ ವ್ಯಾಯಾಮ ಮಾಡಲು ಕಷ್ಟವಾಗುತ್ತದೆ.
ಸಮಯವಿದ್ದರೆ ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ವ್ಯಾಯಾಮಕ್ಕೆ ಉತ್ತಮ ಸಮಯ. ರಾತ್ರಿ ಬೇಗ ನಿದ್ದೆ ಮಾಡಿ ಬೆಳಗ್ಗೆ ಬೇಗ ಎದ್ದರೆ ಬೆಳಗಿನ ವ್ಯಾಯಾಮ ಒಳ್ಳೆಯದು. ಸಂಜೆ ಕೆಲಸದ ನಂತರ ಬೇಗನೆ ಮನೆಗೆ ಮರಳಿದರೆ, ಸಂಜೆಯ ವ್ಯಾಯಾಮವು ಉತ್ತಮವಾಗಿರುತ್ತದೆ. ಆದರೆ ಉತ್ತಮ ಫಲಿತಾಂಶಗಳಿಗಾಗಿ ಸಾಕಷ್ಟು ನಿದ್ರೆ ಮಾಡಬೇಕು, ಸರಿಯಾದ ಆಹಾರವನ್ನು ತೆಗೆದುಕೊಳ್ಳಬೇಕು.