ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಉಂಟಾಗಿರುವ ‘ರೆಮಲ್’ ಚಂಡಮಾರುತವು ಭಾರತದ ಪಶ್ಚಿಮ ಬಂಗಾಳ ಹಾಗೂ ನೆರೆಯ ಬಾಂಗ್ಲಾದೇಶದಲ್ಲಿ ಅಪಾರ ಪ್ರಮಾಣದ ಹಾನಿ ಉಂಟುಮಾಡಿದೆ. ಲಕ್ಷಾಂತರ ಮಂದಿ ಅತಂತ್ರರಾಗಿದ್ದು, ಚಂಡಮಾರುತದಿಂದ ಈವರೆಗೆ ಪಶ್ಚಿಮ ಬಂಗಾಳದಲ್ಲಿ 6 ಹಾಗೂ ಬಾಂಗ್ಲಾದೇಶದಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ.
ಸೋಮವಾರದಂದು ಗಂಟೆಗೆ 110 ರಿಂದ 150 ಕಿ.ಮೀ. ವೇಗದಲ್ಲಿ ಬೀಸುತ್ತಿದ್ದ ಗಾಳಿ ಇಂದು ಗಂಟೆಗೆ 60 ರಿಂದ 90 ಕಿಲೋಮೀಟರ್ ವೇಗಕ್ಕೆ ತಗ್ಗುವ ನಿರೀಕ್ಷೆ ಇದೆ. ಅಲ್ಲದೆ ಚಂಡಮಾರುತ ಇಂದು ಈಶಾನ್ಯ ದಿಕ್ಕಿನತ್ತ ಸಾಗುವ ಅಂದಾಜು ವ್ಯಕ್ತಪಡಿಸಲಾಗಿದೆ. ಬಾಂಗ್ಲಾದೇಶದಲ್ಲಿ ವಿದ್ಯುತ್ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದ್ದು ಕೋಟ್ಯಾಂತರ ಮಂದಿ ಪರದಾಡುತ್ತಿದ್ದಾರೆ.
ಇದರ ಮಧ್ಯೆ ಹಿಂದೂ ಮಹಾಸಾಗರ ವಲಯದಲ್ಲಿ ಚಂಡಮಾರುತಗಳಿಗೆ ಹೆಸರು ಸೂಚಿಸುವ ವ್ಯವಸ್ಥೆಯು ‘ರೆಮಲ್’ ಶಬ್ದದ ಕುರಿತು ಇಂಟ್ರೆಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದೆ. ರೆಮಲ್ ಎಂಬುದು ಅರೇಬಿಕ್ ಪದವಾಗಿದ್ದು, ಇದರ ಅರ್ಥ ‘ಮರಳು’ ಎನ್ನಲಾಗಿದೆ. ಅಲ್ಲದೆ ಬಂಗಾಳ ಕೊಲ್ಲಿಯಲ್ಲಿ ಮುಂಗಾರು ಪೂರ್ವದಲ್ಲಿ ಕಾಣಿಸಿಕೊಂಡಿರುವ ಈ ಹಂಗಾಮಿನ ಮೊದಲ ಚಂಡಮಾರುತ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ.