ಸೋಯಾ ಕ್ಷೀರ: ಸಸ್ಯಜನ್ಯ ಕ್ಷೀರಗಳ ಪೈಕಿ ಮೊದಲಿಗೆ ಬಂದು ಜನಪ್ರಿಯವಾಗಿರುವ ಆಯ್ಕೆಗಳಲ್ಲಿ ಸೋಯಾ ಮಿಲ್ಕ್ ಮುಂಚೂಣಿಯಲ್ಲಿದ್ದು, ಇದನ್ನು ಸೋಯಾಬೀನ್ ಸಸ್ಯದಿಂದ ತೆಗೆಯಲಾಗಿದೆ. ಈ ಕ್ಷೀರವು ಪ್ರೊಟೀನ್, ಪೊಟ್ಯಾಶಿಯಮ್ ಹಾಗೂ ಐಸೋಫ್ಲವೋನ್‌ಗಳ ಉತ್ತಮ ಮೂಲವಾಗಿದೆ.
ಬಾದಾಮಿ ಹಾಲು: ಮಾರುಕಟ್ಟೆಯಲ್ಲಿ ಯಥೇಚ್ಛವಾಗಿ ಸಿಗುವ ಮತ್ತೊಂದು ಸಸ್ಯಜನ್ಯ ಹಾಲೆಂದರೆ ಬಾದಾಮಿ ಹಾಲು. ಇದು ತೆಳ್ಳಗಿದ್ದು, ಸೋಯಾಹಾಲಿಗಿಂತ ನುಣುಪಾಗಿದೆ. ವಿಟಮಿನ್ ಡಿ ಅಲ್ಲದೇ ಕ್ಯಾಲ್ಷಿಯಮ್‌ನ ಭಂಡಾರ ಇದಾಗಿದೆ.
ತೆಂಗಿನಹಾಲು: ತೆಂಗಿನಿಂದ ತೆಗೆಯಲಾದ ಹಾಲು ಅಡುಗೆ ಹಾಗೂ ಬೇಕಿಂಗ್‌ಗೆ ಉತ್ತಮವೆಂದು ಪರಿಗಣಿಸಲಾಗಿದ್ದು, ಇದು ಆಹಾರಕ್ಕೆ ಒಳ್ಳೆಯ ರುಚಿ ಹಾಗೂ ಅರೋಮಾ ಕೊಡುತ್ತದೆ. ತೆಂಗಿನಹಾಲಿನಲ್ಲಿ ಕೊಬ್ಬಿನಂಶ ಹೆಚ್ಚಿದ್ದು ಪ್ರೊಟೀನ್ ಅಂಶ ಅಷ್ಟಾಗಿಲ್ಲ. ವಿಟಮಿನ್ ಡಿ, ಬಿ2, ಬಿ12 ಮತ್ತು ಕ್ಯಾಲ್ಷಿಯಮ್‌ಗಳ ಉತ್ತಮ ಮೂಲ ತೆಂಗಿನಹಾಲು.
ಅಕ್ಕಿಹಾಲು: ಲ್ಯಾಕ್ಟೋಸ್ ಅಲರ್ಜಿ ಇರುವ ಮಂದಿಯಲ್ಲಿ ಅಕ್ಕಿಹಾಲು ಅತ್ಯುತ್ತಮ ಆಯ್ಕೆಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. ಅಧಿಕ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವ ಅಕ್ಕಿಹಾಲಿನಲ್ಲಿ ಕೊಬ್ಬಿನಂಶ ಹಾಗೂ ಇತರ ಪೋಷಕಾಂಶಗಳು ಕಡಿಮೆ ಇದೆ. ಚಹಾ ಹಾಗೂ ಕಾಫಿಗೆ ಸೂಕ್ತವಲ್ಲದೇ ಇದ್ದರೂ ಸಹ ಅಕ್ಕಿಹಾಲು ಓಟ್‌ಮೀಲ್, ಸೂಪ್‌ಗಳು ಹಾಗೂ ಸಾಸ್‌ಗಳ ತಯಾರಿಗೆ ಹೇಳಿ ಮಾಡಿಸಿದಂತೆ ಇದೆ. ಕೊಂಚ ಸಿಹಿಯಾಗಿರುವ ಅಕ್ಕಿಹಾಲು ನಾಲಿಗೆಗೆ ಹಿತ ಕೊಡುವ ಅಕ್ಕಿಯ ರುಚಿಯನ್ನು ಸ್ವಲ್ಪಮಟ್ಟಿಗೆ ಹೊಂದಿದೆ.
ಗೋಡಂಬಿ ಹಾಲು: ಅಡುಗೆ ಹಾಗೂ ಬೇಕಿಂಗ್‌ಗೆ ಬಹಳ ಯೋಗ್ಯವಾಗಿರುವ ಗೋಡಂಬಿ ಹಾಲು ಖಾದ್ಯಗಳಿಗೆ ಕ್ರೀಮೀ ಹದ ಕೊಡಲು ಬಳಸಲಾಗುತ್ತದೆ. ಈ ಹಾಲಿನಲ್ಲಿ ಬಹುತೇಕ ಅಸಂತೃಪ್ತ ಕೊಬ್ಬಿದ್ದು, ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿ ಸೇವಿಸುವ ಆಹಾರದ ಮೇಲೆ ನಿಗಾ ಇಡಬೇಕಾದ ಮಂದಿಯಲ್ಲಿ ಹಾಲಿಗೆ ಸೂಕ್ತವಾದ ಪರ್ಯಾಯವಾಗಿದೆ.
ಇವುಗಳಲ್ಲದೇ ಸಸ್ಯಜನ್ಯ ಕ್ಷೀರದ ಬಹಳಷ್ಟು ಆಯ್ಕೆಗಳು ಮಾರುಕಟ್ಟೆಯಲ್ಲಿದ್ದು ಮಕಾಡಾಮಿಯಾ, ಫ್ಲಾಕ್ಸ್, ಬಟಾಣಿ ಪ್ರೋಟೀನ್, ಬಾಳೇಹಣ್ಣು, ಸೂರ್ಯಕಾಂತಿ, ಕಡ್ಲೇಕಾಯಿ, ಓಟ್, ಹೇಜಲ್‌ನಟ್‌ಗಳು ಇವುಗಳ ಪೈಕಿ ಆಗಿವೆ.