ಕಾಲ ಬದಲಾದಂತೆ ಬದುಕಿನ ಶೈಲಿಯೂ ಬದಲಾಗಿದೆ. ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಜವಾಬ್ದಾರಿಯುತ ಕೆಲಸವಾಗಿದೆ. ಕುಟುಂಬದವರು ನೋಡಿದ ಯುವಕ, ಯುವತಿಯನ್ನು ಮದುವೆಯಾಗುವವರ ನಡುವೆ ತಾವೇ ತಮಗಿಷ್ಟದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ.
ಪ್ರೇಮ ಸಂಬಂಧಗಳು ಬೆಳೆದಂತೆ ಬಾಂಧವ್ಯ ಹೆಚ್ಚಾಗುತ್ತದೆ. ಆದರೆ, ಹೊಂದಾಣಿಕೆ ಕೊರತೆಯಿಂದಾಗಿ ಹೆಚ್ಚಿನ ಸಂಬಂಧಗಳು ಹಾಳಾಗಿಬಿಡುತ್ತವೆ. ಸಂಗಾತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಹೆಚ್ಚಿನ ಯುವಕ/ಯುವತಿಯರು ಸೋತು ಬಿಡುತ್ತಾರೆ.
ಸಂಬಂಧ ಕಡಿದುಕೊಂಡ ಬಳಿಕ ಮತ್ತೆ ಒಂದಾಗುವ ಸಾಧ್ಯತೆ ತೀರಾ ಕಡಿಮೆ. ಮೊದಲೇ ಎಲ್ಲವನ್ನು ಗಮನಿಸಿ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಿ. ಪ್ರೇಮದ ಸಂಬಂಧಗಳು ಮುಂದುವರೆಸುವ ಮೊದಲು ಸಂಗಾತಿಯ ಮನದಲ್ಲಿ ಏನಿದೆ ಎಂಬುದನ್ನು ಗಮನಿಸಿ.
ಯುವಕ/ಯುವತಿ ತಮ್ಮ ಸಂಗಾತಿಯೊಂದಿಗೆ ಎಲ್ಲಾ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆಯೇ? ಅಥವಾ ಏನನ್ನಾದರೂ ಮುಚ್ಚಿಡುತ್ತಾರೆಯೇ? ಎಂಬುದನ್ನು ಗಮನಿಸಿ. ಪರಸ್ಪರರ ನಡುವೆ ನಂಬಿಕೆ, ಗೌರವಗಳು ಇದ್ದಾಗ ಬಾಂಧವ್ಯ ಗಟ್ಟಿಯಾಗುತ್ತದೆ. ನಿಮ್ಮ ಸಂಗಾತಿ ನಿಮಗಿಂತಲೂ ಹೆಚ್ಚು ಕಾಳಜಿ ವಹಿಸುತ್ತಾರೆ, ಪ್ರೀತಿಸುತ್ತಾರೆ, ಗೌರವಿಸುತ್ತಾರೆ ಎಂದಾದಲ್ಲಿ ನಿಮ್ಮ ಆಯ್ಕೆ ಸರಿಯಾಗಿದೆ ಎಂದು ಭಾವಿಸಿ.
ನೀವು ಬೇರೆ ಯುವಕ, ಯುವತಿಯೊಂದಿಗೆ ಮಾತನಾಡಿದಾಗ, ಸಿಡಿಮಿಡಿಗೊಳ್ಳುವ ಸಂಗಾತಿಗಿಂತ ಅಗತ್ಯವೆನಿಸಿದರೆ ಮಾತ್ರ ನಿಮ್ಮ ಅಭಿಪ್ರಾಯವನ್ನು ಬಯಸುವ ಸಂಗಾತಿ ನಿಮ್ಮನ್ನು ಗೌರವಿಸುತ್ತಾರೆ ಎಂದರ್ಥ. ಸಂಗಾತಿಯೊಂದಿಗೆ ಅರಿತು ಬಾಳಿದರೆ ಸಾಮರಸ್ಯದ ಜೀವನ ನಿಮ್ಮದಾಗುತ್ತದೆ.