
ಶೌರ್ಯಂ ಸಮರ್ಪಣಂ ಸುರಕ್ಷಣಂ ಇದು SPG ಯ ಧ್ಯೇಯ ವಾಕ್ಯ. ಭಾರತ ದೇಶದ ಪ್ರಮುಖ ವ್ಯಕ್ತಿಯನ್ನ ಕಾಪಾಡುವ ಜವಾಬ್ದಾರಿ ಇರುವ ವಿಶೇಷ ರಕ್ಷಣಾ ಗುಂಪಿದು.
ಈ ಕಮಾಂಡೋಗಳ ಬಗ್ಗೆ ಇತ್ತೀಚಿಗೆ ನೀವು ಸಾಕಷ್ಟು ಕೇಳಿರುತ್ತಿರಾ. ಪ್ರಧಾನಿ, ಮಾಜಿ ಪ್ರಧಾನಿ ಹಾಗೂ ಅವರ ಕುಟುಂಬದವರಿಗೆ ರಕ್ಷಕರಾಗಿರುವ SPG ಸ್ಥಾಪನೆಯಾಗಿದ್ದು, 1985 ರಲ್ಲಿ. ಶೂನ್ಯ ದೋಷ ಹಾಗೂ ಉತ್ಕೃಷ್ಟತೆಯ ಸಂಸ್ಕೃತಿ ಹೊಂದಿರೋ ಈ ಕಮಾಂಡೋಗಳು ದೇಶದ ಹೊರಗೆ ಮತ್ತು ಒಳಗೆ ಪ್ರಧಾನಿಯವರ ರಕ್ಷಣೆ ಜವಾಬ್ದಾರಿ ವಹಿಸಿಕೊಂಡಿದೆ.
ಕಪ್ಪು ಸೂಟ್ ಹಾಕಿ, ಕಪ್ಪು ಕನ್ನಡಕ ಧರಿಸಿಕೊಂಡು, ಕಪ್ಪು ಬ್ರೀಫ್‌ಕೇಸ್ ಹಿಡಿದುಕೊಂಡು ಪ್ರಧಾನಿಯ ಸುತ್ತ ಕಾಣಿಸಿಕೊಳ್ಳೊ ಇವರು ಭಕ್ತಿ, ಸಮರ್ಪಣೆ, ಧೈರ್ಯದ ಸಂಕೇತ. ಆದ್ರೆ ಇವರು ಹಿಡಿದುಕೊಳ್ಳೊ ಬ್ರೀಫ್‌ಕೇಸ್‌ನಲ್ಲಿ ಏನಿದೆ ಅನ್ನೋ ಕುತೂಹಲ ಎಲ್ಲರಲ್ಲೂ ಇದ್ದೆ ಇದೆ.
ಈ ಬ್ರೀಫ್‌ಕೇಸ್‌ನಲ್ಲಿ ಏನಿದೆ ಎಂಬುದರ ಕುರಿತು ಜನರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಹಲವರು ನ್ಯೂಕ್ಲಿಯಾರ್ ಕಂಟ್ರೋಲ್ ಇದೆ ಎಂದು ಹೇಳುತ್ತಾರೆ. ಆದರೆ, ವಾಸ್ತವವಾಗಿ ಕಪ್ಪು ಬ್ರೀಫ್ ಕೇಸ್ ನಮ್ಮ ಪ್ರಧಾನಿ ಅವರಿಗಿರುವ ರಕ್ಷಣಾತ್ಮಕ ಬುಲೆಟ್ ಪ್ರೂಫ್ ಶೀಲ್ಡ್ ಆಗಿದೆ. ಇದು ತುರ್ತು ಸಂದರ್ಭಗಳಲ್ಲಿ ತಕ್ಷಣದ ಮತ್ತು ತಾತ್ಕಾಲಿಕ ರಕ್ಷಣೆ ನೀಡುತ್ತದೆ.
ಈ ಬ್ರೀಫ್ ಕೇಸ್ ಅನ್ನು ಪ್ರಧಾನಿಯವರ ಮೇಲೆ ಅಟ್ಯಾಕ್ ಆದ ಸಂದರ್ಭಗಳಲ್ಲಿ ತಕ್ಷಣವೇ ಅವರ ಸುತ್ತ ಹಿಡಿದು ಅವರಿಗೆ ರಕ್ಷಣೆ ನೀಡಲಾಗುತ್ತದೆ. ರಕ್ಷಾ ಕವಚದಂತೆ ಬಳಸುವ ಈ ಚಿಕ್ಕ ಬ್ರೀಫ್ ಕೇಸ್ ಪ್ರಧಾನಿಯವರ ಸುತ್ತ ರಕ್ಷಣಾತ್ಮಕ ಗೋಡೆಯಂತೆ ತೆರೆದುಕೊಳ್ಳುತ್ತದೆ.
ಈ ಬ್ರೀಫ್ ಕೇಸ್ 3 ಬ್ಯಾಲಿಸ್ಟಿಕ್ ರಕ್ಷಣೆಯ ಭರವಸೆ ನೀಡುತ್ತದೆ. ಎಮರ್ಜನ್ಸಿಯಲ್ಲಿ ಶೀಲ್ಡ್ ಅನ್ನು ತೆರೆಯಲು ಅದನ್ನು ಕೆಳಕ್ಕೆ ಎಳೆಯಬೇಕು. ಈ ಶೀಲ್ಡ್ ನಲ್ಲಿ ಹೆಚ್ಚಿನ ಭದ್ರತೆಗಾಗಿ ಗನ್ ಗಳನ್ನು ಅಡಗಿಸಿಡಲಾಗುತ್ತದೆ, ಪಿಸ್ತೂಲ್ ಸಾಗಿಸುವ ರಹಸ್ಯ ಪಾಕೆಟ್ ಅನ್ನು ಸಹ ಹೊಂದಿದೆ. ಬ್ರೀಫ್‌ಕೇಸ್ ಜೊತೆಗೆ, ದಾಳಿಕೋರರಿಗೆ ಅನುಮಾನ ಬಾರದಂತೆ ಅವರ ದಾರಿತಪ್ಪಿಸಲು SPG ಕಮಾಂಡೋಗಳು ಯಾವಾಗಲೂ ಕಪ್ಪು ಕನ್ನಡಕವನ್ನು ಧರಿಸಿರುತ್ತಾರೆ.
