ಜನನ ಮತ್ತು ಮರಣ ಜೀವನದ ಎರಡು ಕಟು ವಾಸ್ತವಗಳು. ಯಾರಿಂದಲೂ ಸಾವನ್ನು ಗೆಲ್ಲಲು ಸಾಧ್ಯವಿಲ್ಲ. ಆದರೆ ಮೃತಪಟ್ಟ ವ್ಯಕ್ತಿಯ ಸರ್ಕಾರಿ ದಾಖಲೆಗಳಾದ ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್, ಪಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಚಾಲನಾ ಪರವಾನಿಗೆಯನ್ನು ಏನು ಮಾಡುವುದು ಎಂದು ಕೆಲವು ಮಂದಿಗೆ ಮಾತ್ರವೇ ತಿಳಿದಿರುತ್ತದೆ. ಈ ದಾಖಲೆಗಳನ್ನೆಲ್ಲಾ ಅದರ ಮಾಲೀಕರು ಮೃತಪಟ್ಟ ಮೇಲೆ ಏನು ಮಾಡಬೇಕೆಂದು ನಾವು ನಿಮಗೆ ತಿಳಿಸುತ್ತೇವೆ.
ಪಾಸ್ಪೋರ್ಟ್
ಪಾಸ್ಪೋರ್ಟ್ ಕಾಯಿದೆ ಪ್ರಕಾರ, ಒಮ್ಮೆ ಪಾಸ್ಪೋರ್ಟ್ ಮಾಡಿದ ಬಳಿಕ ಅದರ ಮಾಲೀಕರು ಮೃತಪಟ್ಟ ಮೇಲೆ ಅದನ್ನು ರದ್ದುಪಡಿಸಲು ಬರುವುದಿಲ್ಲ. ಪಾಸ್ಪೋರ್ಟ್ ವಾಯಿದೆ ಮುಗಿದ ಬಳಿಕ ಅದು ತನ್ನಿಂತಾನೇ ಅಸಿಂಧುಗೊಳ್ಳುತ್ತದೆ. ಇಂಥ ಪರಿಸ್ಥಿತಿಯಲ್ಲಿ ಮೃತಪಟ್ಟ ವ್ಯಕ್ತಿಯ ಪಾಸ್ಪೋರ್ಟ್ ಅನ್ನು ಸುರಕ್ಷಿತವಾಗಿ ಇಡಬೇಕು.
ಅಂತರಾಷ್ಟ್ರೀಯ ಪ್ರಯಾಣಿಕರು ಭಾರತಕ್ಕೆ ಬಂದ ಬಳಿಕ ಮಾಡಲೇಬೇಕು ಈ ಕೆಲಸ
ಮತದಾರರ ಗುರುತಿನ ಚೀಟಿ
ಮತದಾರರ ಗುರುತಿನ ನೋಂದಣಿ ನಿಯಮ, 1960ರ ಅನುಸಾರ (ಮತದಾರರ ನೋಂದಣಿ ನಿಯಮಗಳು, 1960), ಮೃತಪಟ್ಟ ವ್ಯಕ್ತಿಯ ಮತದಾರನ ಗುರುತಿನ ಚೀಟಿಯನ್ನು ರದ್ದು ಮಾಡಬೇಕು. ಹೀಗೆ ಮಾಡುವುದರಿಂದ ಆ ಗುರುತಿನ ಚೀಟಿಯ ದುರ್ಬಳಕೆಯ ಸಾಧ್ಯತೆ ಇಲ್ಲವಾಗಿಸಬಹುದು. ಮೃತಪಟ್ಟ ವ್ಯಕ್ತಿಯ ವಾರಸುದಾರರು ಅವರ ಪರವಾಗಿ ಫಾರಂ 7 ಅನ್ನು ಭರ್ತಿ ಮಾಡಿ, ಹತ್ತಿರದಲ್ಲಿರುವ ಚುನಾವಣಾ ಕಚೇರಿಗೆ ತಲುಪಿಸಬೇಕು. ಇದರೊಂದಿಗೆ ಮರಣ ಪ್ರಮಾಣ ಪತ್ರದ ನಕಲು ಪ್ರತಿಯನ್ನೂ ಸಹ ಲಗತ್ತಿಸಬೇಕು.
ಚಾಲನಾ ಪರವಾನಿಗೆ
ಮೃತಪಟ್ಟ ವ್ಯಕ್ತಿಯ ಚಾಲನಾ ಪರವಾನಿಗೆ ಸಂಬಂಧ ಪ್ರತಿಯೊಂದು ರಾಜ್ಯದಲ್ಲೂ ಬೇರೆ ಬೇರೆ ರೀತಿಯ ನಿಯಮಗಳಿವೆ. ಚಾಲನಾ ಪರವಾನಿಗೆದಾರ ಮೃತಪಟ್ಟಲ್ಲಿ, ಆತನ ಸಂತತಿಯ ಮಂದಿ ಈ ಪರವಾನಿಗೆಯ ರದ್ದು ಮಾಡಲು ಕೋರಿ ಹತ್ತಿರದ ಆರ್‌ಟಿಓ ಕಾರ್ಯಾಲಯಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಈ ಪ್ರಕ್ರಿಯೆ ಬಳಿಕ ಪರವಾನಿಗೆ ರದ್ದಾಗುತ್ತದೆ.
ಪಾನ್ ಕಾರ್ಡ್
ಯಾವುದೇ ಆರ್ಥಿಕ ವಹಿವಾಟಿಗೂ ಅತ್ಯಗತ್ಯವಾದ ಪಾನ್ ಕಾರ್ಡ್ ಅನ್ನು, ಅದರ ವಾರಸುದಾರರು ಮೃತಪಟ್ಟಲ್ಲಿ, ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿರುವ ಎಲ್ಲಾ ಬ್ಯಾಂಕ್ ಖಾತೆಗಳನ್ನು ಮೊದಲು ಮುಚ್ಚಬೇಕು. ಇದಾದ ಬಳಿಕ ಪಾನ್ ಕಾರ್ಡ್ ರದ್ದು ಮಾಡಲು ಕೋರಿ ಆದಾಯ ತೆರಿಗೆ ಇಲಾಖೆಗೆ ಅರ್ಜಿ ಸಲ್ಲಿಸಬೇಕು.
ಆಧಾರ್ ಕಾರ್ಡ್
ದೇಶದಲ್ಲಿ ಯಾವುದೇ ಪ್ರಜೆಯ ಅತ್ಯಂತ ಪ್ರಮುಖವಾದ ಗುರುತಿನ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಸಹ ಒಂದು. ಪಿಂಚಣಿ, ವಿದ್ಯಾರ್ಥಿ ವೇತನ, ಎಲ್‌ಪಿಜಿ ಸಬ್ಸಿಡಿ ಸೇರಿದಂತೆ ಬಹುತೇಕ ಎಲ್ಲಾ ಸರ್ಕಾರಿ ಯೋಜನೆಗಳೂ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಆಗಿವೆ. ಇಂಥ ಪರಿಸ್ಥಿತಿಯಲ್ಲಿ, ಮೃತಪಟ್ಟ ವ್ಯಕ್ತಿಯ ಆಧಾರ್ ಕಾರ್ಡ್‌ನಲ್ಲಿರುವ ಬಯೋಮೆಟ್ರಿಕ್ಸ್ ವಿವರಗಳನ್ನು, ಎಂಆಧಾರ್ ಅಪ್ಲಿಕೇಶನ್ ಅಥವಾ ಯುಐಡಿಎಐ ಪೋರ್ಟಲ್‌ಗೆ ಭೇಟಿ ಕೊಟ್ಟು ಲಾಕ್ ಮಾಡಿಸಬಹುದಾಗಿದೆ.