ಸುಕ್ಕು ಎಂದಾಕ್ಷಣ ವಯಸ್ಸಾದ, ಸುಕ್ಕುಗಟ್ಟಿದ ಮುಖ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಆದ್ರೆ ಸದ್ಯ ಚರ್ಚೆಯಲ್ಲಿರುವುದು ಬಟ್ಟೆಯ ಮೇಲಿನ ಸುಕ್ಕು. ‘ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್’ನ ವಿಜ್ಞಾನಿಗಳು ‘ಸುಕ್ಕುಗಳು ಒಳ್ಳೆಯದು’ ಎಂಬ ಅಭಿಯಾನ ಪ್ರಾರಂಭಿಸಿದ್ದಾರೆ. ಇದರ ಅಡಿಯಲ್ಲಿ ಪ್ರತಿಯೊಬ್ಬ ಉದ್ಯೋಗಿಯೂ ಸೋಮವಾರ ಇಸ್ತ್ರಿ ಮಾಡದ ಬಟ್ಟೆಗಳನ್ನು ಧರಿಸಬೇಕೆಂದು ಕೋರಿದ್ದಾರೆ. ಈ ಮೂಲಕ ಪರೋಕ್ಷವಾಗಿ ಪರಿಸರಕ್ಕೆ ಪ್ರಯೋಜನ ನೀಡಿದಂತಾಗುತ್ತದೆ.
ಪರಿಸರ ಉಳಿಸುವ ಅಭಿಯಾನ
CSIR ಪ್ರಕಾರ, ‘ಸುಕ್ಕುಗಳು ಒಳ್ಳೆಯದು’ ಅಭಿಯಾನವು ಇಂಧನ ಉಳಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ “ಹವಾಮಾನ ಬದಲಾವಣೆಯನ್ನು ಇಸ್ತ್ರಿ ಮಾಡೋಣ ಮತ್ತು ನಮ್ಮ ಬಟ್ಟೆಗಳನ್ನಲ್ಲ” ಎಂದು ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಕೋಟ್ಯಾಂತರ ಜನರು ಈ ಅಭ್ಯಾಸವನ್ನು ಅಳವಡಿಸಿಕೊಂಡರೆ ಅನೇಕ ಸಕಾರಾತ್ಮಕ ಬದಲಾವಣೆಗಳು ಸಂಭವಿಸಬಹುದು. ಅಂದಾಜಿನ ಪ್ರಕಾರ ಒಂದು ಜೊತೆ ಬಟ್ಟೆಯನ್ನು ಇಸ್ತ್ರಿ ಮಾಡುವಾಗ 200 ಗ್ರಾಂ ಕಾರ್ಬನ್ ಹೊರಸೂಸುತ್ತದೆ.
ಬಟ್ಟೆ ಇಸ್ತ್ರಿ ಮಾಡದಿದ್ದರೆ ಏನಾಗುತ್ತದೆ ?
ಪ್ರಸ್ತುತ ಮೇ 1 ರಿಂದ 15 ರವರೆಗೆ ‘ಸ್ವಚ್ಛ ಪಖ್ವಾಡಾ’ ಆಚರಿಸುತ್ತಿರುವ ಸಿಎಸ್ಐಆರ್ ಮತ್ತು ಪ್ರಯೋಗಾಲಯಗಳ ಮೊದಲ ಮಹಿಳಾ ಮಹಾನಿರ್ದೇಶಕಿ ಡಾ. ಎನ್ ಕಲೈಸೆಲ್ವಿ ಅವರ ನೇತೃತ್ವದಲ್ಲಿ ‘ರಿಂಕಲ್ಸ್ ಅಚ್ಚೆ ಹೈ’ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಇದು ಅನೇಕ ಪರಿಸರ ಸ್ನೇಹಿ ಕ್ರಮಗಳನ್ನು ಒಳಗೊಂಡಿದೆ.
ಬಟ್ಟೆಯನ್ನು ಇಸ್ತ್ರಿ ಮಾಡುವುದು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಗೆ ಸಮಾನವಾಗಿದೆ. ಇಸ್ತ್ರಿ ಮಾಡದ ಬಟ್ಟೆಗಳನ್ನು ಧರಿಸುವುದರಿಂದ ಸ್ವಲ್ಪ ಮಟ್ಟಿಗೆ ಇಂತಹ ಹೊಗೆಯನ್ನು ತಡೆಯಬಹುದು. ಕಲ್ಲಿದ್ದಲು ಭಾರತದಲ್ಲಿ ವಿದ್ಯುತ್ ಉತ್ಪಾದನೆಯ ಪ್ರಮುಖ ಮೂಲವಾಗಿದೆ, ಆದ್ದರಿಂದ ವಿದ್ಯುತ್ ಉಳಿಸಿದರೆ ಕಲ್ಲಿದ್ದಲಿನ ಬಳಕೆ ಕಡಿಮೆಯಾಗುತ್ತದೆ. ಇದು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ.
ಸಿಎಸ್‌ಐಆರ್‌ನ ಉಪಕ್ರಮವು ಸಾಂಕೇತಿಕವಾಗಿದ್ದರೂ, ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯ ವಿರುದ್ಧದ ಹೋರಾಟಕ್ಕೆ ಜನರನ್ನು ಪ್ರೇರೇಪಿಸುತ್ತದೆ. CSIR ತನ್ನ ಪ್ರಯೋಗಾಲಯಗಳಲ್ಲಿ ವಿದ್ಯುತ್ ಬಳಕೆಯನ್ನು 10 ಪ್ರತಿಶತದಷ್ಟು ಕಡಿಮೆ ಮಾಡಲು ಯೋಜಿಸಿದೆ. ಇತ್ತೀಚಿಗೆ ಭಾರತದ ಅತಿ ದೊಡ್ಡ ಹವಾಮಾನ ಗಡಿಯಾರವನ್ನು CSIR ಪ್ರಧಾನ ಕಚೇರಿಯ ಕಟ್ಟಡದ ಮೇಲೆ ಸ್ಥಾಪಿಸಲಾಗಿತ್ತು.