ಒಮ್ಮೊಮ್ಮೆ ಅಗತ್ಯಕ್ಕಿಂತ ಹೆಚ್ಚು ಅಡಿಗೆ ಮಾಡಿಬಿಡ್ತೇವೆ. ಒಂದೇ ಬಾರಿ ಎಲ್ಲವನ್ನೂ ಖಾಲಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಇನ್ನೊಮ್ಮೆ ತಿಂದರಾಯ್ತು ಅಂತಾ ಬದಿಗಿಡ್ತೇವೆ. ಮತ್ತೆ ತಿನ್ನುವಾಗ ರುಚಿ ಹೆಚ್ಚಾಗ್ಲಿ ಎನ್ನುವ ಕಾರಣಕ್ಕೆ ಆಹಾರವನ್ನು ಬಿಸಿ ಮಾಡ್ತೇವೆ. ಆದ್ರೆ ಆಹಾರ ಬಿಸಿ ಮಾಡೋದ್ರಿಂದ ಏನು ನಷ್ಟ ಅನ್ನೋದನ್ನು ನಾವು ಗಮನಿಸೋದಿಲ್ಲ.
ಕೆಲವೊಂದು ಆಹಾರಗಳನ್ನು ಮತ್ತೆ ಮತ್ತೆ ಬಿಸಿ ಮಾಡಬಾರದು. ಇದು ನಮ್ಮ ಆರೋಗ್ಯಕ್ಕೆ ಹಾನಿಕಾರಕ.
ಅಣಬೆ ಆಹಾರಗಳನ್ನು ತಯಾರಿಸಿದ ದಿನವೇ ಖಾಲಿ ಮಾಡಿ. ಪದೇ ಪದೇ ಅಣಬೆಯ ಪದಾರ್ಥವನ್ನು ಬಿಸಿ ಮಾಡಿ ತಿನ್ನುವುದರಿಂದ ಅದರಲ್ಲಿರುವ ಪ್ರೋಟೀನ್ ರಚನೆಯಲ್ಲಿ ಬದಲಾವಣೆಯಾಗುತ್ತದೆ. ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಹಸಿರು ತರಕಾರಿ ಪಾಲಕ್ ನಲ್ಲಿ ನೈಟ್ರೇಟ್ ಪ್ರಮಾಣ ಜಾಸ್ತಿಯಿರುತ್ತದೆ. ಪಾಲಕ್ ನಿಂದ ಮಾಡಿದ ಆಹಾರವನ್ನೂ ಮತ್ತೆ ಬಿಸಿ ಮಾಡಿ ಸೇವನೆ ಮಾಡುವುದು ಒಳ್ಳೆಯದಲ್ಲ. ಇದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕ್ಯಾನ್ಸರ್ ನಂತ ರೋಗಕ್ಕೆ ಕಾರಣವಾಗುತ್ತದೆ.
ಮೊಟ್ಟೆ ಕೂಡ ಒಳ್ಳೆಯದಲ್ಲ. ಎಗ್ ಬುರ್ಜಿಯನ್ನು ನೀವು ಮತ್ತೆ ಬಿಸಿ ಮಾಡಿದ್ರೆ ಅದು ವಿಷವಾಗಿ ಮಾರ್ಪಡುತ್ತದೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ.
ಚಿಕನ್ ತಿನ್ನಲು ಬಹಳ ರುಚಿ. ಹಾಗೆ ಆರೋಗ್ಯಕ್ಕೆ ಒಳ್ಳೆಯದು. ಹಾಗಂತ ಪದೇ ಪದೇ ಬಿಸಿ ಮಾಡಿ ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅನಿವಾರ್ಯವಾದ್ರೆ ಸಲಾಡ್ ಅಥವಾ ಸ್ಯಾಂಡ್ವಿಚ್ ಜೊತೆ ತಿನ್ನಿ.