ಬೆಂಗಳೂರು : ಕಳೆದ ವರ್ಷ ಭೀಕರ ಬರಗಾಲ ಇದ್ದುದ್ದರಿಂದ ಬೀಜೋತ್ಪಾದನೆಯಲ್ಲಿ ತೀವ್ರ ಕುಸಿತ ಕಂಡಿದ್ದು ಇದರಿಂದಾಗಿ ಬಿತ್ತನೆ ಬೀಜದ ದರ ಏರಿಕೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕಳೆದ ವರ್ಷ ಭೀಕರ ಬರಗಾಲ ಇದ್ದುದ್ದರಿಂದ ಬೀಜೋತ್ಪಾದನೆಯಲ್ಲಿ ತೀವ್ರ ಕುಸಿತ ಕಂಡಿದ್ದು ಇದರಿಂದಾಗಿ ಬಿತ್ತನೆಬೀಜದ ದರ ಏರಿಕೆಯಾಗಿದೆ. ಇದು ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶಾದ್ಯಂತ ದರ ಏರಿಕೆ ಕಂಡಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿಯೇ ದರ ಸಾಕಷ್ಟು ಕಡಿಮೆಯಿದೆ ಸಿಎಂ ಸಿದ್ದರಾಮಯ್ಯ ಹೇಳಿದರು.
ಬಿ.ಟಿ. ಹತ್ತಿ ಬಿತ್ತನೆ ಬೀಜಗಳನ್ನು ರಾಜ್ಯ ಸರ್ಕಾರದ ಇಲಾಖಾ ವತಿಯಿಂದ ರಿಯಾಯತಿ ದರದಲ್ಲಿ ವಿತರಣೆ ಮಾಡುತ್ತಿರುವುದಿಲ್ಲ. ಬಿ.ಟಿ. ಹತ್ತಿ ಬಿತ್ತನೆ ಬೀಜಗಳ ಗರಿಷ್ಠ ದರಗಳನ್ನು ಕೇಂದ್ರ ಸರ್ಕಾರದ ವತಿಯಿಂದಲೇ ನಿಗದಿಪಡಿಸಲಾಗುತ್ತದೆ. ರಾಜ್ಯದಲ್ಲಿನ ವಿವಿಧ ಬೆಳೆಗಳ ಬಿತ್ತನೆ ಬೀಜಗಳಲ್ಲಿನ ದರ ವ್ಯತ್ಯಾಸವು 2023ರ ಹೋಲಿಕೆಯಲ್ಲಿ ಈ ಬಾರಿ ಗರಿಷ್ಠ ಶೇ.48.50ರಷ್ಟಿದೆ. ಆದಾಗ್ಯೂ, ನೆರೆಯ ರಾಜ್ಯಗಳಲ್ಲಿನ ಪ್ರಸಕ್ತ ಸಾಲಿನ ಬಿತ್ತನೆ ಬೀಜಗಳ ದರಗಳ ಏರಿಕೆಯ ಹೋಲಿಕೆಯಲ್ಲಿ ರಾಜ್ಯದಲ್ಲಿನ ಬಿತ್ತನೆ ಬೀಜಗಳ ದರದ ಏರಿಕೆಯು ಕಡಿಮೆಯಾಗಿರುತ್ತದೆ. ಉದಾಹರಣೆಗೆ ಮಹಾರಾಷ್ಟ್ರದಲ್ಲಿ ಸೋಯಾಅವರೆ ಬೆಳೆಗೆ ಪ್ರತಿ ಕ್ವಿಂಟಾಲ್ಗೆ ಎಲ್-1 ದರವು ರೂ.8500/- ನಿಗದಿಯಾಗಿದ್ದು ಕರ್ನಾಟಕದಲ್ಲಿ ಇದು ರೂ.7270/- ನಿಗದಿಯಾಗಿದೆ. ಅದೇ ರೀತಿ, ತೊಗರಿ ಬೆಳೆಗೆ ಮಹಾರಾಷ್ಟ್ರದಲ್ಲಿ ಪ್ರತಿ ಕ್ವಿಂಟಾಲ್ಗೆ ರೂ.25,000/- ಇದ್ದು ಕರ್ನಾಟಕದಲ್ಲಿ ಪ್ರತಿ ಕ್ವಿಂಟಾಲ್ಗೆ ರೂ.17,900/- ನಿಗದಿಪಡಿಸಲಾಗಿದೆ. ಹೆಸರು ಮತ್ತು ಜೋಳದ ಬೆಳೆಗೆ ಪ್ರತಿ ಕ್ವಿಂಟಾಲ್ಗೆ ಮಹಾರಾಷ್ಟ್ರದಲ್ಲಿ ಕ್ರಮವಾಗಿ ರೂ.23,500/- ರೂ. 14,000/- ಇದ್ದು ಕರ್ನಾಟಕದಲ್ಲಿ ಕ್ರಮವಾಗಿ ರೂ.18,600/- ರೂ.12,500/- ನಿಗದಿಪಡಿಸಲಾಗಿದೆ. ಈ ಹೋಲಿಕೆಯಲ್ಲಿ ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ವಿವಿಧ ಬೆಳೆಗಳ ಬಿತ್ತನೆ ಬೀಜಗಳ ದರಗಳು ಗಣನೀಯವಾಗಿ ಕಡಿಮೆ ಇರುವುದು ಕಂಡುಬರುತ್ತದೆ. ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯು ಉತ್ತಮವಾಗಿ ಆಗುತ್ತಿದ್ದು ಕೃಷಿ ಚಟುವಟಿಕೆಗಳು ಗರಿಗೆದರಿವೆ. ಇದೇ ವೇಳೆ, ಬಿತ್ತನೆ ಬೀಜಗಳ ದರಗಳು ಏರಿಕೆಯಾಗಿರುವ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು ಈ ಕುರಿತು ಕೃಷಿ ಇಲಾಖೆಯು ಸ್ಪಷ್ಟೀಕರಣ ನೀಡಿದ್ದು ವಾಸ್ತವ ಸ್ಥಿತಿಯನ್ನು ವಿವರಿಸಿದೆ.
ಈ ಬಾರಿ ಹೆಸರು ಬೆಳೆಯ ಬಿತ್ತನೆ ಬೀಜಗಳ ಎಲ್-1 ದರವು ಶೇ.48.5, ಉದ್ದು ಬೆಳೆಯ ದರವು ಶೇ.37.72, ತೊಗರಿ ಬೆಳೆಯ ವಿವಿಧ ತಳಿಗಳ ಬಿತ್ತನೆ ಬೀಜಗಳ ದರದಲ್ಲಿ ಶೇ.28.29 ರಿಂದ 37.69ರಷ್ಟು ಮತ್ತು ಜೋಳದ ಬೆಳೆಯ ಎಲ್-1 ದರವು ಶೇ.7.66 ರಿಂದ ಶೇ.33.33ರಷ್ಟು ಹೆಚ್ಚಾಗಿರುತ್ತದೆ. ಬೀಜಗಳ ಖರೀದಿ ದರದಲ್ಲಿನ ಹೆಚ್ಚಳದ ಮೊತ್ತವು ಬೀಜೋತ್ಪಾದನೆಯಲ್ಲಿ ತೊಡಗಿರುವ ರೈತರಿಗೆ ವರ್ಗಾವಣೆಯಾಗಿರುತ್ತದೆ ಎನ್ನುವುದು ಗಮನಾರ್ಹ ಅಂಶವಾಗಿದೆ. ಇದಲ್ಲದೆ ಕೆಲ ಬಿತ್ತನೆ ಬೀಜದ ದರದಲ್ಲಿ ಇಳಿಕೆ ಹಾಗೂ ಯಥಾಸ್ಥಿತಿ ಕೂಡ ಕಂಡುಬಂದಿದೆ. 2024ರ ಮುಂಗಾರು ಹಂಗಾಮಿನ ಸೋಯಾಅವರೆ ಬಿತ್ತನೆ ಬೀಜದ ದರವು 2023ರ ಮುಂಗಾರು ಹಂಗಾಮಿನ ಎಲ್-1 ದರಗಳ ಹೋಲಿಕೆಯಲ್ಲಿ ಶೇ.8ರಷ್ಟು ಕಡಿತಗೊಂಡಿರುತ್ತದೆ. ಸೂರ್ಯಕಾಂತಿ ಬಿತ್ತನೆ ಬೀಜದ ದರ ಕಳೆದ ಸಾಲಿನಷ್ಟೇ ಇದ್ದು ಯಾವುದೇ ಬದಲಾವಣೆ ಇರುವುದಿಲ್ಲ ಎಂದರು.