ಸಾಮಾಜಿಕ ಜಾಲತಾಣ ಮೂಲಕ ಖ್ಯಾತಿ ಗಳಿಸಿದ ದೆಹಲಿಯ ಹೊರಭಾಗದಲ್ಲಿ ವಡಾಪಾವ್ ಮಾರುತ್ತಿದ್ದ ಯುವತಿಯನ್ನು ಬಂಧಿಸಿಲ್ಲ ಮತ್ತು ಯಾವುದೇ ಕೇಸ್ ದಾಖಲಿಸಿಲ್ಲ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ವಡಾ ಪಾವ್ ಮಾರುತ್ತಿದ್ದ ‘ವಡಾ ಪಾವ್ ಗರ್ಲ್’ ಎಂದೇ ಖ್ಯಾತರಾಗಿರುವ ಚಂದ್ರಿಕಾ ದೀಕ್ಷಿತ್ ಅವರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿರುವುದನ್ನು ತೋರಿಸುವ ವೈರಲ್ ವೀಡಿಯೊಗಳಿಗೆ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.
ಮಂಗೋಲ್ಪುರಿ ಪ್ರದೇಶದಲ್ಲಿ ಫುಡ್ ಸ್ಟಾಲ್ ನಡೆಸುತ್ತಿರುವ ಚಂದ್ರಿಕಾ ದೀಕ್ಷಿತ್, ಕೆಲವು ದಿನಗಳ ಹಿಂದೆ ತನ್ನ ಸ್ಟಾಲ್ ಬಳಿ ಸಮುದಾಯ ಔತಣ ಕೂಟ ಆಯೋಜಿಸಿದ್ದರು. ಇದರಿಂದ ಹೆಚ್ಚಿನ ಟ್ರಾಫಿಕ್ ಜಾಂ ಉಂಟಾಗಿತ್ತು.
ಅಷ್ಟೇ ಅಲ್ಲದೇ ಪುರಸಭೆಯ ಅನುಮತಿಯಿಲ್ಲದೆ ಸ್ಟಾಲ್ ನಡೆಸಲಾಗ್ತಿದ್ದು ಆನ್ ಲೈನ್ ನಲ್ಲಿ ಹೆಚ್ಚಿನ ಖ್ಯಾತಿ ಗಳಿಸಿದ್ದರಿಂದ ಹೆಚ್ಚಿನ ಸಂಖ್ಯೆಯ ಗ್ರಾಹಕರು ಸೇರಿ ಸಂಚಾರಕ್ಕೆ ಅಡಚಣೆಯಾಗಿತ್ತು. ಟ್ರಾಫಿಕ್ ಜಾಮ್ ಆಗಿರುವ ಬಗ್ಗೆ ನಿವಾಸಿಗಳಿಂದ ದೂರುಗಳು ಬಂದಿದ್ದರಿಂದ ಪೊಲೀಸ್ ತಂಡವು ಸ್ಥಳಕ್ಕೆ ಆಗಮಿಸಿದಾಗ ಅನುಚಿತವಾಗಿ ವರ್ತಿಸಿದರು. ಈ ವೇಳೆ ಆಕೆಯ ಸ್ಟಾಲ್ ಅನ್ನು ವಶಪಡಿಸಿಕೊಂಡು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಈ ಘಟನೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಮತ್ತು ಚಂದ್ರಿಕಾ ದೀಕ್ಷಿತ್ ಅವರನ್ನು ಬಂಧಿಸಲಾಗಿಲ್ಲ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಚಂದ್ರಿಕಾ ದೀಕ್ಷಿತ್ ದೆಹಲಿಯಲ್ಲಿ ವಡಾ ಪಾವ್ ಸ್ಟಾಲ್ ನಡೆಸುತ್ತಿರುವ ಬೀದಿಬದಿ ಆಹಾರ ಮಾರಾಟಗಾರರಾಗಿದ್ದಾರೆ. ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ 30 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ಪ್ರತಿನಿಧಿಯೊಂದಿಗೆ ಫೋನ್ ಕರೆಯಲ್ಲಿ ಮಾತನಾಡುತ್ತಾ ಅಧಿಕಾರಿಗಳು ಅವರ ಸ್ಟಾಲ್ ಅನ್ನು ತೆಗೆದುಹಾಕುವುದಾಗಿ ಬೆದರಿಕೆ ಹಾಕಿದ ನಂತರ ಚಂದ್ರಿಕಾ ದೀಕ್ಷಿತ್ ಕಣ್ಣೀರು ಹಾಕಿದ ವಿಡಿಯೋ ವೈರಲ್ ಆದ ನಂತರ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಪಡೆದರು.