ರಾಜ್ಯದಲ್ಲೀಗ ಮೈ ಸುಟ್ಟುಹೋಗುವಂತಹ ಬಿಸಿಲು. ಹೊರಗೆ ಬಂದರೆ ಜನ ಬೆವೆತುಹೋಗುತ್ತಾರೆ, ನೆತ್ತಿ ಸುಟ್ಟುಹೋಗುವಂತಹ ರೀತಿ ರಣಬಿಸಿಲಿದೆ. ಈ ವೇಳೆ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮನೆಯಿಂದ ಹೊರಗೆ ಹೋಗುವ ವೇಳೆ ಕೆಲವರು ಸನ್ ಸ್ಕ್ರೀನ್ ಹಚ್ಚಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ಟೋಪಿ, ಸನ್ ಗ್ಲಾಸ್, ಛತ್ರಿ ಬಳಸುತ್ತಾರೆ.
ಆದ್ರೆ ಇಂದು ಮಾರುಕಟ್ಟೆಯಲ್ಲಿ ಬಗೆಬಗೆ ವಿನ್ಯಾಸದ ಬಣ್ಣ ಬಣ್ಣದ ಛತ್ರಿಗಳು ಲಭ್ಯವಿದ್ದು ಎಂತಹ ಛತ್ರಿ(ಕೊಡೆ) ಬಳಕೆ ಉತ್ತಮ ಆಯ್ಕೆ ಎಂಬ ಸಾಮಾನ್ಯ ಪ್ರಶ್ನೆ ಸಾಕಷ್ಟು ಜನರಲ್ಲಿದೆ. ಇಂತಹ ಪ್ರಶ್ನೆಗೆ ಭಾರತೀಯ ಹವಾಮಾನ ಇಲಾಖೆ ಸ್ಪಷ್ಟ ಉತ್ತರ ನೀಡಿದೆ.
ಭಾರತೀಯ ಹವಾಮಾನ ಇಲಾಖೆಯ (IMD) ವಿಜ್ಞಾನಿ ಎ ಪ್ರಸಾದ್ ಪ್ರಕಾರ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಕಪ್ಪು ಬಣ್ಣದ ಛತ್ರಿ ಉತ್ತಮ ಆಯ್ಕೆ. ಛತ್ರಿಯ ಬಣ್ಣವು ಶಾಖವನ್ನು ನಿರ್ವಹಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಕಪ್ಪು ಛತ್ರಿಗಳು ಸೂರ್ಯನ ಬೆಳಕು ಮತ್ತು ಶಾಖವನ್ನು ಹೀರಿಕೊಳ್ಳುತ್ತವೆ. ತರುವಾಯ ಅತಿಗೆಂಪು ವಿಕಿರಣವನ್ನು(UV rays) ಹೊರಸೂಸಿ ಹಾನಿಕಾರಕ ಯುವಿ ಕಿರಣಗಳು ದೇಹವನ್ನು ತಲುಪುವುದನ್ನು ತಡೆಯುವ ತಡೆಗೋಡೆಯನ್ನು ಸೃಷ್ಟಿಸುತ್ತವೆ ಎಂದಿದ್ದಾರೆ.
ಬಿಳಿ ಛತ್ರಿಗಳು ಬೆಳಕನ್ನು ಪ್ರತಿಬಿಂಬಿಸುವಾಗ, UV ವಿಕಿರಣವನ್ನು ಭೇದಿಸುವುದಕ್ಕೆ ಅವಕಾಶ ಮಾಡಿಕೊಡುತ್ತವೆ. ಇದರಿಂದ ಚರ್ಮದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳುಂಟಾಗುತ್ತೆ ಎಂದು ಅವರು ವಿವರಿಸಿದ್ದಾರೆ. ಹಲವರು ಈಗಾಗಲೇ ಉತ್ತಮ ಹಳೆಯ ಕಪ್ಪು ಛತ್ರಿಗಳನ್ನು ಬಳಸುತ್ತಿದ್ದಾರೆ.