ಕೆಲವು ಪುರುಷರಲ್ಲಿ ವೀರ್ಯಾಣು ಕೊರತೆ ಇರುತ್ತದೆ. ವೀರ್ಯವನ್ನು ಉತ್ಪಾದಿಸದ ಪುರುಷರ ಸ್ಥಿತಿಯನ್ನು ಅಜೋಸ್ಪೆರ್ಮಿಯಾ ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯು ಸುಮಾರು ಶೇ.1ರಷ್ಟು ಪುರುಷರಲ್ಲಿ ಕಂಡುಬರುತ್ತದೆ.
ಪುರುಷ ಬಂಜೆತನದಲ್ಲಿ ಈ ಸಮಸ್ಯೆಯು ಹದಿನೈದು ಪ್ರತಿಶತದಷ್ಟು ಜನರಲ್ಲಿ ಸಂಭವಿಸುತ್ತದೆ. ಇದನ್ನು ಗುರುತಿಸಲು ಯಾವುದೇ ಲಕ್ಷಣಗಳಿಲ್ಲ. ವೀರ್ಯಾಣು ಕೊರತೆಯಿದ್ದಾಗ ಸಂಗಾತಿ ಗರ್ಭಿಣಿಯಾಗಲು ಸಾಧ್ಯವಾಗುವುದಿಲ್ಲ.
ಅಜೋಸ್ಪೆರ್ಮಿಯಾದಿಂದ ಬಳಲುತ್ತಿರುವ ಪುರುಷರಲ್ಲಿ ವೀರ್ಯಾಣುಗಳು ಉತ್ಪತ್ತಿಯಾಗುವುದಿಲ್ಲ ಅಥವಾ ಕೆಲವು ಸಮಸ್ಯೆಗಳಿಂದ ವೀರ್ಯವು ದೇಹದಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಗೆ ಕಾರಣ ಮತ್ತು ಪರಿಹಾರದ ಬಗ್ಗೆ ತಿಳಿದುಕೊಳ್ಳೋಣ.
ಅಜೋಸ್ಪೆರ್ಮಿಯಾ ಕೇವಲ ಪುರುಷ ಬಂಜೆತನಕ್ಕೆ ಸೀಮಿತವಾಗಿರುವುದಿಲ್ಲ. ಇದು ಇತರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಅಜೋಸ್ಪೆರ್ಮಿಯಾವನ್ನು ಹೊಂದಿದ್ದರೆ, ತಕ್ಷಣ ವೈದ್ಯರಿಂದ ಪರೀಕ್ಷಿಸಿಕೊಳ್ಳಿ. ಮುಜುಗರದ ಕಾರಣದಿಂದ ಅನೇಕ ಪುರುಷರು ಈ ಸಮಸ್ಯೆಯ ಬಗ್ಗೆ ಹೇಳುವುದಿಲ್ಲ. ಆದರೆ ನೀವು ತಜ್ಞರನ್ನು ಸಂಪರ್ಕಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ. ಜೊತೆಗೆ ವೀರ್ಯಾಣು ಕೊರತೆಗೆ ಕಾರಣವಾಗಬಲ್ಲ ಕೆಲವೊಂದು ಅಭ್ಯಾಸಗಳನ್ನು ಪುರುಷರು ತ್ಯಜಿಸಬೇಕು.
ಉದ್ವೇಗ: ಕೆಲವರು ಸಣ್ಣಪುಟ್ಟ ವಿಚಾರಕ್ಕೆಲ್ಲ ಆತಂಕಗೊಳ್ಳುತ್ತಾರೆ. ಅತಿಯಾದ ಟೆನ್ಷನ್ ಮತ್ತು ಉದ್ವೇಗಕ್ಕೊಳಗಾಗುವ ಪುರುಷರು ಜಾಗರೂಕರಾಗಿರಬೇಕು. ಏಕೆಂದರೆ ಒತ್ತಡದಿಂದಾಗಿ ಪುರುಷರಲ್ಲಿ ವೀರ್ಯದ ಸಂಖ್ಯೆ ಕಡಿಮೆಯಾಗಬಹುದು. ಆತಂಕ ಮತ್ತು ಒತ್ತಡಕ್ಕೆ ಗುರಿಯಾಗುವುದರಿಂದ ವೀರ್ಯದ ಗುಣಮಟ್ಟವು ಕಡಿಮೆಯಾಗುತ್ತದೆ. ಅದಕ್ಕಾಗಿ ಯಾವಾಗಲೂ ಸಂತೋಷದಿಂದ ಇರಬೇಕು ಮತ್ತು ಒತ್ತಡದಿಂದ ದೂರವಿರಬೇಕು.
ವ್ಯಾಯಾಮದ ಕೊರತೆ: ವ್ಯಾಯಾಮ ಮಾಡದೇ ಇರುವವರು ಬೊಜ್ಜಿನ ಸಮಸ್ಯೆಯಿಂದ ತೊಂದರೆಗೊಳಗಾಗಬಹುದು. ಸ್ಥೂಲಕಾಯತೆಯಿಂದಾಗಿ ವೀರ್ಯದ ಚಲನಶೀಲತೆ ನಿಧಾನವಾಗುತ್ತದೆ. ಇದು ನಿಮ್ಮ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರಬಹುದು. ಅದಕ್ಕಾಗಿಯೇ ನೀವು ಪ್ರತಿದಿನ ವ್ಯಾಯಾಮ ಮಾಡಬೇಕು.
ತಡವಾಗಿ ಮಲಗಬೇಡಿ: ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರು ತಡರಾತ್ರಿಯವರೆಗೆ ನಿದ್ರೆ ಮಾಡುವುದಿಲ್ಲ. ಈ ಕಾರಣದಿಂದಾಗಿ ಅವರು ಒತ್ತಡ ಮತ್ತು ಬೊಜ್ಜಿನ ಸಮಸ್ಯೆ ಎದುರಿಸುತ್ತಾರೆ. ಇದು ಕೂಡ ವೀರ್ಯಾಣುಗಳ ಕೊರತೆ ಉಂಟುಮಾಡಬಹುದು. ರಾತ್ರಿಯಲ್ಲಿ ಎಚ್ಚರವಾಗಿರುವುದರಿಂದ ಮಾನಸಿಕವಾಗಿ ತೊಂದರೆಗೊಳಗಾಗುತ್ತೀರಿ ಮತ್ತು ನಿಮ್ಮ ರೋಗನಿರೋಧಕ ಶಕ್ತಿಯೂ ದುರ್ಬಲವಾಗಿರುತ್ತದೆ. ಅದಕ್ಕಾಗಿಯೇ ನೀವು ತಡವಾಗಿ ಮಲಗುವ ಅಭ್ಯಾಸವನ್ನು ಬದಲಾಯಿಸಬೇಕು.