alex Certify ಪ್ರತಿನಿತ್ಯ ‘ಯೋಗ’ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು..? ತಿಳಿಯಿರಿ |International Day of Yoga | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿನಿತ್ಯ ‘ಯೋಗ’ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು..? ತಿಳಿಯಿರಿ |International Day of Yoga

ಯೋಗ ಅಭ್ಯಾಸ ಮಾಡುವುದು ಬಹಳ ಮುಖ್ಯ. ಅದು ಕೇವಲ ನಮ್ಮ ದೈಹಿಕ ಆರೋಗ್ಯದ ದೃಷ್ಠಿಯಿಂದ ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಒಂದು ಉತ್ತಮ ಮಾರ್ಗವಾಗಿದೆ.  ಪ್ರತಿ ವರ್ಷ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ.

ಮನುಷ್ಯ ಆಧುನಿಕ ಜಗತ್ತಿನಲ್ಲಿ ದಿನನಿತ್ಯದ ಜೀವನವನ್ನು ಯಾಂತ್ರಿಕವಾಗಿ ಕಳೆಯುತ್ತಿದ್ದು ಮಾನಸಿಕ ನೆಮ್ಮದಿ ಪಡೆದುಕೊಳ್ಳಲು ಅನ್ಯಮಾರ್ಗಗಳಿಗೆ ಒಳಗಾಗುತ್ತಿದ್ದಾನೆ. ಆದರೆ ನಮ್ಮ ಸಂಪ್ರದಾಯದಲ್ಲಿಯೇ ಬಂದಿರುವ ಯೋಗವನ್ನು ಅಭ್ಯಾಸ ಮಾಡಲು ನಿಯಮಿತವಾಗಿ ಸಮಯ ಮೀಸಲು ಇಟ್ಟರೆ ಉತ್ತಮ ಆರೋಗ್ಯವನ್ನು ಹೊಂದಲು ಸಾಧ್ಯವಾಗುತ್ತದೆ.

ಯೋಗಭ್ಯಾಸ ಭಾರತೀಯ ಸಂಸ್ಕತಿಯ ಒಂದು ಅಮೂಲ್ಯವಾದ ಕೊಡುಗೆ ಎಂದು ಹೇಳಿದರೆ ತಪ್ಪಾಗಲಾರದು. ನಮ್ಮ ಪೂರ್ವಜರು ನಮಗೆ ಅನೇಕ ವಿಚಾರವನ್ನು ಮತ್ತು ರೂಢಿಗಳನ್ನು ಬಿಟ್ಟು ಹೋಗಿದ್ದಾರೆ. ಅದರಲ್ಲಿ ಈ ಯೋಗಾಸನ ಕೂಡ ಒಂದು. ಯೋಗದ ನಿಯಮಿತ ಅಭ್ಯಾಸವು ದೇಹ ಮತ್ತು ಆತ್ಮವನ್ನು ಶುದ್ದಿಗೊಳಿಸುತ್ತವೆ ಎಂದು ನಮ್ಮ ಪೂರ್ವಜರು ಸಂಪೂರ್ಣವಾಗಿ ನಂಬಿದ್ದರು.

ಭಾರತದಲ್ಲಿ ಯೋಗವು ವೇದಗಳ ಪೂರ್ವ ಹಾಗೂ ವೇದಗಳ ಕಾಲದಲ್ಲಿ ಅಸ್ತಿತ್ವ ಇರುವ ಉಲ್ಲೇಖಗಳನ್ನು ನಾವು ನೋಡಬಹುದು. ಯೋಗದ ಇತಿಹಾಸದಲ್ಲಿ 2000 ವರ್ಷಗಳ ಅವಧಿಯು ಉಪನಿಷತ್ತುಗಳಿಂದ ಪ್ರಧಾನವಾಗಿದೆ. ಇದರಲ್ಲಿ ವೈದಿಕ ಸಾಹಿತ್ಯದ ಅರ್ಥಗಳನ್ನು ವಿವರಿಸಲಾಗಿದೆ. ದೇಹ ಮತ್ತು ಮನಸ್ಸು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಆಧ್ಯಾತ್ಮಿಕ ಬೋಧನೆಯ ಮೂಲಕ ತಿಳಿಸಲಾಗಿದೆ. 108 ಲಿಖಿತ ದಾಖಲೆಗಳಲ್ಲಿ 20 ಯೋಗ ಉಪನಿಷತ್ತುಗಳಿವೆ. ಇವುಗಳಲ್ಲಿ ಪ್ರಾಣಾಯಾಮ, ಪ್ರತ್ಯಾಹಾರ, ಸಮನ್ವಯತೆ ವಿಭಿನ್ನ ಯೋಗ ತಂತ್ರಗಳ ಮೇಲೆ ಕೇಂದ್ರೀಕರಿಸುವ ಮೂಲಕ ವ್ಯಕ್ತಪಡಿಸಿದ್ದಾರೆ.

ಯೋಗಗಳಲ್ಲಿ ಹಠ ಯೋಗ, ವಿನ್ಯಾಸ ಯೋಗ, ಪವರ್ ಯೋಗ, ಬಿಕ್ರಮ ಯೋಗ, ಜೀವಮುಕ್ತಿ ಯೋಗ, ಅಯ್ಯಂಗಾರ್ ಯೋಗ, ಅನುಸರ ಯೋಗ, ಶಿವಾನಂದ ಯೋಗ, ವಿನಿಯೋಗ, ಕುಂಡಲಿನಿ ಯೋಗ, ಯಿನ್ಯೋಗ ಎಂಬ ಹಲವು ವಿಧಗಳನ್ನು ನೋಡಬಹುದು.

ಯೋಗದ ಉಪಯೋಗ

ಯೋಗದ ಉಪಯೋಗಗಳನ್ನು ನೊಡುವುದಾದರೆ ಯೋಗದ ಆಸನಗಳು ಐಸೋ ಮೆಟ್ರಿಕ್ ಅಂದರೆ ಕೆಲವು ಸೆಕೆಂಡುಗಳಿಂದ ಹಲವಾರು ನಿಮಿಷಗಳವರೆಗೆ ಸ್ನಾಯುವಿನ ಒತ್ತಡವನ್ನು ಹಿಡಿದುಕೊಳ್ಳುತ್ತವೆ. ಇದು ಹೃದಯ ರಕ್ತನಾಳಗಳ ಆರೋಗ್ಯ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಹಾಗೂ ನಿಯಮಿತ ಯೋಗ ಅಭ್ಯಾಸವು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.

ಸುಧಾರಿತ ರಕ್ತ ಪರಿಚಲನೆ ಮತ್ತು ಸುತ್ತಮುತ್ತಲಿನ ಸ್ನಾಯುಗಳ ಮಸಾಜ್ ಪರಿಣಾಮವು ಸಾಮಾನ್ಯ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಉತ್ತೇಜಿಸುತ್ತದೆ. ಕೀಲುಗಳ ಚಲನಶೀಲತೆಯನ್ನು ಉತ್ತೇಜಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಮೃದುವಾದ ಹಿಗ್ಗಿಸುವಿಕೆಯು ಸ್ನಾಯು, ಜಂಟಿ ಒತ್ತಡವನ್ನು ಮತ್ತು ಬಿಗಿತವನ್ನು ಸಡಿಲಗೊಳಿಸಿ ಅನುಕೂಲ ಮಾಡಿಕೊಡುತ್ತದೆ. ನಿರಂತರ ಬೆನ್ನು ನೋವಿಗೆ ಉಪಶಮನ ಒದಗಿಸುತ್ತದೆ. ವಿಶ್ರಾಂತಿಯನ್ನು ನೀಡುತ್ತದೆ, ಜೊತೆಗೆ ಉತ್ತಮ ನಿದ್ರೆ ಮಾಡಲು ಕೂಡ ಅನುಕೂಲ ಮಾಡಿಕೊಡುತ್ತದೆ.

ನಿರಂತರ ಯೋಗಾಭ್ಯಾಸವು ನಕಾರಾತ್ಮಕ ಭಾವನೆಗಳಿಂದ ದೂರವಿರಲು ಸಹಾಯ ಮಾಡುತ್ತದೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳ ಪ್ರಕಾರ ಯೋಗವು ಒತ್ತಡ ನಿರ್ವಹಣೆ, ಸಾವಧಾನತೆ, ಆರೋಗ್ಯಕರ ಆಹಾರ ಮತ್ತು ತೂಕ ನಷ್ಟಗಳಂತಹ ಆರೋಗ್ಯ ಕಾರಕಗಳನ್ನು ಬೆಂಬಲಿಸುತ್ತದೆ ಎಂದು ವೈಜ್ಞಾನಿಕ ಪುರಾವೆಗಳನ್ನು ತೋರಿಸುತ್ತದೆ. ಯೋಗ ತರಗತಿಗಳಿಗೆ ಹೋಗುವುದರ ಮೂಲಕ ಹಾಗೂ ಉತ್ತಮ ವಾತಾವರಣದಲ್ಲಿ ಅಭ್ಯಾಸ ಮಾಡುವುದರಿಂದ ಸಾರ್ವಜನಿಕವಾಗಿ ಸಹ ತೊಡಗಿಕೊಳ್ಳಬಹುದು. ಯೋಗವು ಮಕ್ಕಳಲ್ಲಿ ಬುದ್ಧಿ ಶಕ್ತಿಯನ್ನು ಹೆಚ್ಚಿಸುತ್ತದೆ. ಚಂಚಲ ಮನಸ್ಸನು ಹಿಡಿತದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ, ಹೀಗೆ ಅನೇಕ ತರಹದ ಉಪಯೋಗಗಳನ್ನು ನಾವು ಯೋಗ ಮಾಡುವುದರಿಂದ ಪಡೆದುಕೊಳ್ಳಬಹುದು.

ಯಾವುದೇ ರೀತಿಯ ವಯಸ್ಸಿನ ಮಿತಿ ಇಲ್ಲದೆ ಪ್ರತಿಯೊಬ್ಬರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಮಾಡಬಹುದು. ದಿನನಿತ್ಯ ಯೋಗಾಭ್ಯಾಸ ಮಾಡುವುದು ಜೀವನದಲ್ಲಿ ಒಂದು ಹೊಸ ಹುರುಪನ್ನು ನೀಡುತ್ತದೆ. ಪ್ರಸ್ತುತ ದಿನಗಳಲ್ಲಿ ಜನರು ಒಳ್ಳೆಯ ವಿಚಾರದ ಕಡೆಗೆ ಗಮನ ಹರಿಸುವುದು ಹೆಚ್ಚಾಗುತ್ತಿದೆ. ಜೊತೆಗೆ ಯಾವುದೇ ಅಭ್ಯಾಸ ಬೇಗನೆ ಫಲಿತಾಂಶ ನೀಡಬೇಕೆಂದು ಬಯಸುತ್ತಾರೆ. ಹಾಗಾಗಿ ಯೋಗದ ಕಡೆ ಒಲವು ಕಡಮೆ. ಆದರೆ ಯೋಗದÀ ಅಭ್ಯಾಸವು ಯಾವುದೇ ಅಡ್ಡ ಪರಿಣಾಮಗಳನ್ನು ಮಾಡುವುದಿಲ್ಲ. ಉತ್ತಮ ಪರಿಣಾಮಗಳನ್ನು ನೀಡುತ್ತಾ ಹೋಗುತ್ತದೆ. ಯೋಗ ಅಭ್ಯಾಸ ಮಾಡಲು ಸ್ವಲ್ಪ ಸಮಯ ಮತ್ತು ಇಚ್ಛೆಯನ್ನು ರೂಢಿಸಿಕೊಂಡರೆ ಉತ್ತಮವಾದ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...