ಜೀವನ ಎನ್ನುವುದೇ ಅನಿಶ್ಚಿತತೆಗಳ ಸಾಲು. ನಾವು ನಿರೀಕ್ಷಿಸಿದ್ದಕ್ಕಿಂತ ಅನಿರೀಕ್ಷಿತಗಳೇ ಜೀವನದಲ್ಲಿ ಎಲ್ಲವೂ. ಕೆಲವು ಅನಿರೀಕ್ಷಿತಗಳು ಖುಷಿ ಕೊಟ್ಟರೆ ಕೆಲವು ನೋವು ಕೊಡುತ್ತವೆ.
ತನ್ನೊಂದಿಗೆ ಆರು ವರ್ಷಗಳಿಂದ ಸಂಸಾರ ಮಾಡುತ್ತಿರುವ ಮಡದಿ ವಾಸ್ತವದಲ್ಲಿ ತನ್ನ ಸಹೋದರಿ ಎಂದು ತಿಳಿದ ವ್ಯಕ್ತಿಯೊಬ್ಬರಿಗೆ ಜೀವನ್ಮಾನದ ದೊಡ್ಡ ಶಾಕ್ ಆಗಿದೆ.
ಈ ವಿಚಾರವನ್ನು ರೆಡ್ಡಿಟ್‌ನಲ್ಲಿ ಶೇರ್ ಮಾಡಿದ ಈತ, “ನಮ್ಮ ಮಗ ಜನಿಸುತ್ತಲೇ ನನ್ನ ಮಡದಿಗೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಕೆಗೆ ಈಗ ಕಿಡ್ನಿ ಕಸಿ ಮಾಡಬೇಕಾದ ಅಗತ್ಯವಿದೆ. ಆಕೆಯ ಬಂಧುಗಳಲ್ಲಿ ಈ ಬಗ್ಗೆ ವಿಚಾರಿಸಿ ನೋಡಿದಾಗ ಆಕೆಗೆ ಹೋಲಿಕೆಯಾಗುವ ಕಿಡ್ನಿ ಸಿಗಲಿಲ್ಲ,” ಎಂದಿದ್ದಾರೆ.
ತಾನು ಹುಟ್ಟಿದ ನಿಮಿಷಗಳಲ್ಲೇ ತನ್ನನ್ನು ದತ್ತು ಪಡೆಯಲಾಯಿತು ಎನ್ನುವ ಈತನಿಗೆ ತನ್ನ ಜೈವಿಕ ತಂದೆ-ತಾಯಂದಿರ ಬಗ್ಗೆ ಗೊತ್ತೇ ಇಲ್ಲ.
“ನನಗೆ ಇದೊಂದು ದೊಡ್ಡ ಕೆಲಸ ಎಂದು ಗೊತ್ತಿತ್ತು. ಹಾಗಾಗಿ ನಾನು ಆಕೆಗೆ ಕಿಡ್ನಿ ದಾನ ಮಾಡಬಹುದೇ ಎಂದು ನೋಡಲು ಮುಂದೆ ಬಂದೆ. ನನ್ನದು ಆಕೆಗೆ ಹೋಲಿಕೆಯಾಗುತ್ತದೆ ಎಂದು ನನಗೆ ಕೆಲ ದಿನಗಳ ಬಳಿಕ ಕರೆ ಬಂತು. ಇದೇ ವೇಳೆ, ಈ ವಿಚಾರವಾಗಿ ಟೆಸ್ಟಿಂಗ್ ಒಂದನ್ನು ಮಾಡುವುದಿದೆ ಎಂದು ವೈದ್ಯರು ತಿಳಿಸಿದರು. ಹ್ಯೂಮನ್ ಲ್ಯೂಕೋಸೈಟ್ ಆಂಟಿಜೆನ್ (ಎಚ್‌ಎಲ್‌ಎ) ಟಿಶ್ಯೂ ಪರೀಕ್ಷೆ ಫಲಿತಾಂಶ ಪಡೆಯಲು ನಾನು ಸಹಮತ ಸೂಚಿಸಿದೆ.
ಆದರೆ ಈ ಪರೀಕ್ಷೆಯ ಫಲಿತಾಂಶಗಳು ಬರುತ್ತಲೇ, ನನಗೆ ಮತ್ತು ನನ್ನ ಪತ್ನಿಯ ನಡುವೆ ಹೋಲಿಕೆಗಳು ವಿಪರೀತ ಇದ್ದವು. ನನಗೆ ಶಾಕ್ ಮತ್ತು ಗೊಂದಲಗಳೆರಡೂ ಒಟ್ಟಿಗೇ ಆದವು. ಡಿಎನ್‌ಎ ಮಾಹಿತಿಗಳು ಹೆತ್ತವರಿಂದ ಮಕ್ಕಳಿಗೆ ವರ್ಗಾವಣೆಯಾಗುವ ಕಾರಣ ತಂದೆ ಅಥವಾ ತಾಯಿಯೊಂದಿಗೆ ಮಕ್ಕಳಿಗೆ 50% ಮ್ಯಾಚ್ ಆಗಬಹುದು ಹಾಗೇ ಒಡಹುಟ್ಟಿದವರೊಂದಿಗೆ 0-100% ಮ್ಯಾಚ್ ಆಗಬಹುದು. ಆದರೆ ಪತಿ, ಪತ್ನಿಯಾಗಿ ಹೀಗೆ ಸಿಕ್ಕಾಪಟ್ಟೆ ಮ್ಯಾಚ್ ಆಗುವುದು ಅಪರೂಪ. ಹೀಗೆ ಆಗುವುದು ಎಂದರೇನೆಂದು ನಾನು ಅವರಲ್ಲಿ ಕೇಳಿದೆ.
ನಾನು ಒಬ್ಬರಿಗೊಬ್ಬರು ರಕ್ತ ಹಂಚಿಕೊಂಡವರು. ನನಗೆ ಮುಂದೆ ಏನು ಮಾಡಬೇಕೆಂದು ತೋಚುತ್ತಿಲ್ಲ ಆದರೆ ಇದು ತಪ್ಪೆಂದು ನನಗೆ ಅನಿಸುತ್ತದೆ. ಆಕೆ ನನ್ನ ಮಡದಿ ಮತ್ತು ನನ್ನ ಮಕ್ಕಳ ತಾಯಿ.” ಎಂದು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ನೆಟ್ಟಿಗರು, “ನಿಮಗೆ ಅದಾಗಲೇ ಮದುವೆಯಾಗಿದ್ದು ಮಕ್ಕಳೂ ಆಗಿದ್ದಾರೆ. ಹಾಗಾಗಿ ಮಿಕ್ಕಿದ್ದೆಲ್ಲವನ್ನೂ ಮರೆತು ಮಕ್ಕಳಿಗೆ ಉತ್ತಮ ಭವಿಷ್ಯ ನೀಡುವತ್ತ ಚಿತ್ತ ಹರಿಸಿ,” ಎಂಬ ಅರ್ಥದಲ್ಲಿ ಕಾಮೆಂಟ್‌ಗಳ ಮೂಲಕ ಅವರಲ್ಲಿ ಧೈರ್ಯ ತುಂಬಿದ್ದಾರೆ.