ಖಾಸಗಿ ವಾಹಿನಿಯ ಚರ್ಚೆಯೊಂದರಲ್ಲಿ ಭಾರತವನ್ನು ಮೋದಿಯ ನಾಡು ಎಂಬ ಅರ್ಥ ಬರುವಂತೆ ಉಲ್ಲೇಖಿಸಿದ ನಟ ಅಕ್ಷಯ್ ಕುಮಾರ್ ತೀವ್ರ ಟೀಕೆ ಮತ್ತು ಟ್ರೋಲ್ ಗೆ ಒಳಗಾಗಿದ್ದಾರೆ .
ಈ ವರ್ಷದ ಸ್ವಾತಂತ್ರ್ಯ ದಿನದಂದು ಭಾರತೀಯ ಪೌರತ್ವವನ್ನು ಪಡೆದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ವಿದೇಶದ ವಲಸೆ ಕಚೇರಿಯಲ್ಲಿ ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದ ಸಮಯವನ್ನು ನೆನಪಿಸಿಕೊಂಡರು. ಚರ್ಚೆಯೊಂದರಲ್ಲಿ ವಿದೇಶದಲ್ಲಿರುವ ವಲಸೆ ಕಚೇರಿಯಲ್ಲಿ ನಾವು ಭಾರತೀಯ ಪಾಸ್‌ಪೋರ್ಟ್‌ನೊಂದಿಗೆ ನಿಂತಾಗ, ಅಲ್ಲಿನ ಜನರು ನಮ್ಮನ್ನು ತುಂಬಾ ಗೌರವದಿಂದ ನೋಡುತ್ತಾರೆ ಮತ್ತು ಅವರು “ಓಹ್, ನೀವು ಮೋದಿಯವರ ನಾಡಿನಿಂದ ಬಂದಿದ್ದೀರಿ” ಎಂದು ಹೇಳುತ್ತಾರೆ ಎಂದರು.
ವಿದೇಶದಲ್ಲಿ ಜನರು ಭಾರತೀಯರನ್ನು ಬಹಳ ಗೌರವದಿಂದ ಕಾಣುತ್ತಾರೆ ಎಂದು ಅಕ್ಷಯ್ ಪ್ರತಿಪಾದಿಸಿದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟಿಜನ್‌ಗಳ ಒಂದು ಗುಂಪು ಅಕ್ಷಯ್ ಅವರ ಹೇಳಿಕೆಗಾಗಿ ಅಪಹಾಸ್ಯ ಮತ್ತು ಟ್ರೋಲ್ ಮಾಡಿದ್ದಾರೆ. ಮತ್ತೊಂದು ಗುಂಪು ಅಕ್ಷಯ್ ಕುಮಾರ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ.
ಈ ಹಿಂದೆ ತನ್ನ ಕೆನಡಾದ ಪೌರತ್ವದ ಬಗ್ಗೆ ಟೀಕೆಗಳನ್ನು ಎದುರಿಸಿದ್ದ ಅಕ್ಷಯ್ ಕುಮಾರ್, ಸ್ವಾತಂತ್ರ್ಯ ದಿನದಂದು ಮತ್ತೊಮ್ಮೆ ಭಾರತೀಯ ಪ್ರಜೆ ಎಂದು ಅಧಿಕೃತವಾಗಿ ಘೋಷಿಸಿಕೊಂಡು ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಅವರ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಅಕ್ಷಯ್ ಅವರ ಚಲನಚಿತ್ರಗಳು ಭಾರತದಲ್ಲಿ ಕ್ಲಿಕ್ ಆಗದ ಕಾರಣ ಕೆನಡಾಕ್ಕೆ ಸ್ಥಳಾಂತರಗೊಂಡರು. ಅಕ್ಷಯ್ ಕೆನಡಾದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದರೂ, ಅವರು ಮತ್ತೊಮ್ಮೆ ಭಾರತದಲ್ಲಿ ವೃತ್ತಿಪರ ಯಶಸ್ಸನ್ನು ಸಾಧಿಸಲು ಪ್ರಾರಂಭಿಸಿದಾಗ ಭಾರತದಲ್ಲಿ ಉಳಿಯಲು ನಿರ್ಧರಿಸಿದರು.