ಕೊರೊನಾ ನಂತ್ರ ಕೆಲಸ ಮಾಡುವ ವಿಧಾನ ಬದಲಾಗಿದೆ. ಹಿಂದೆ ಕಚೇರಿಗೆ ಬಂದು ಕೆಲಸ ಮಾಡೋದು ಕಡ್ಡಾಯವಾಗಿತ್ತು. ಕೊರೊನಾ ಹಾಗೂ ಲಾಕ್ ಡೌನ್ ಸಂದರ್ಭದಲ್ಲಿ ಕಂಪನಿಗಳು ವರ್ಕ್ ಫ್ರಂ ಹೋಮ್ ಗೆ ಹೊಂದಿಕೊಳ್ಳಬೇಕಾಯ್ತು. ಆರಂಭದಲ್ಲಿ ಇದು ಸ್ವಲ್ಪ ಕಷ್ಟವೆನ್ನಿಸಿದ್ರೂ ನಂತ್ರ ಕಂಪನಿಗಳು ಇದಕ್ಕೆ ಒಗ್ಗಿಕೊಂಡವು. ಈಗ ವರ್ಕ್ ಫ್ರಂ ಹೋಮ್ ಕಂಪನಿಗಳಿಗೆ ಲಾಭ ತರ್ತಿದೆ.
ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯ ಒದಗಿಸಿರುವ ಕಂಪನಿಗಳು ನಾಲ್ಕು ಪಟ್ಟು ಹೆಚ್ಚು ಆದಾಯ ಗಳಿಸ್ತಿವೆ ಎಂಬುದು ಸಮೀಕ್ಷೆಯಿಂದ ಹೊರ ಬಿದ್ದಿದೆ. ಸ್ಕೂಪ್ ಟೆಕ್ನಾಲಜೀಸ್ ಮತ್ತು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಈ ಸಮೀಕ್ಷೆ ನಡೆಸಿದೆ. ಒಟ್ಟು 554 ಕಂಪನಿಗಳ ಡೇಟಾವನ್ನು ಸಮೀಕ್ಷೆಗೆ ಬಳಸಿಕೊಳ್ಳಲಾಗಿದೆ. ಈ ಕಂಪನಿಗಳು ಒಟ್ಟು 2.67 ಕೋಟಿ ಜನರಿಗೆ ಉದ್ಯೋಗ ನೀಡುತ್ತಿವೆ. ಈ ಕಂಪನಿಗಳು ವರ್ಕ್ ಫ್ರಂ ಹೋಮ್ ಅಥವಾ ವರ್ಕ್ ಫ್ರಂ ಆಫೀಸ್ ಆಯ್ಕೆಯನ್ನು ಉದ್ಯೋಗಿಗಳಿಗೆ ಬಿಟ್ಟಿದೆ.
ವರ್ಕ್ ಫ್ರಂ ಹೋಮ್ ನೀಡಿದ ಕಂಪನಿಗಳ ಆದಾಯ ಶೇಕಡಾ 21 ರಷ್ಟು ಹೆಚ್ಚಳವಾಗಿದೆ. ಅದೇ ಹೈಬ್ರಿಡ್ ಅಥವಾ ಆಫೀಸ್ ಮಾದರಿಯ ಕೆಲಸದಲ್ಲಿ ಕಂಪನಿಗೆ ಕೇವಲ ಶೇಕಡಾ 5 ರಷ್ಟು ಲಾಭವಾಗಿದೆ ಎಂಬ ಸಂಗತಿ ಬಹಿರಂಗವಾಗಿದೆ. ಇನ್ನು ಕಚೇರಿ ಕೆಲಸಕ್ಕೆ ಹೋಲಿಸಿದ್ರೆ ಹೈಬ್ರಿಡ್ ಮಾದರಿ ಅನುಸರಿಸುತ್ತಿರುವ ಕಂಪನಿಗೆ ಲಾಭ ಹೆಚ್ಚಾಗಿದೆ. ಹೈಬ್ರಿಡ್ ಮಾದರಿಯಲ್ಲಿ ಉದ್ಯೋಗಿಗಳು ಕೆಲ ದಿನ ಕಚೇರಿಗೆ ಬಂದ್ರೆ ಮತ್ತೆ ಕೆಲ ದಿನ ಮನೆಯಿಂದ ಕೆಲಸ ಮಾಡ್ತಾರೆ. ವರ್ಕ್ ಫ್ರಂ ಹೋಮ್ ನೀಡಿದ ಕಂಪನಿಗಳು ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದು ಸುಲಭ. ಕಂಪನಿ ವ್ಯಾಪ್ತಿ ವಿಸ್ತಾರವಾಗುತ್ತದೆ. ಆದ್ರೆ ಉದ್ಯೋಗಿಗಳಿಗೆ ಕಂಪನಿ ಹೆಚ್ಚುವರಿ ಖರ್ಚು ಮಾಡ್ಬೇಕಿಲ್ಲ. ಕಚೇರಿ ಬಾಡಿಗೆ, ಊಟ, ಟೀ, ವಾಹನ ಸೌಲಭ್ಯ ಸೇರಿದಂತೆ ಅನೇಕ ಖರ್ಚು ಉಳಿಯುತ್ತದೆ. ಇದರ ಪರಿಣಾಮ ಕಂಪನಿ ಆದಾಯದ ಮೇಲೆ ಗೋಚರಿಸುತ್ತದೆ.