ಮುಂಬೈ– ಗಾಂಧಿ ನಗರ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಪಶ್ಚಿಮ ರೈಲ್ವೆ 25 ರೈಲ್ವೆಗಳ ಸಮಯವನ್ನೇ ಬದಲಾಯಿಸಲು ನಿರ್ಧರಿಸಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರೈಲ್ವೆ ಇಲಾಖೆ ಅಧಿಕಾರಿಗಳು, ಈಗಾಗಲೇ ಮುಂಬೈ-ಅಹಮದಾಬಾದ್ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಸಮಯವನ್ನ ಬದಲಾಯಿಸಲಾಗಿದೆ. ಹಾಗೂ ಗುಜರಾತ್ ವಾಪಿ ಮತ್ತು ಅಹಮದಾಬಾದ್ ರೈಲು ನಿಲ್ದಾಣಗಳ ನಡುವೆಯೂ ಸಮಯದ ಬದಲಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇನ್ನು 20901/02 ಮುಂಬೈ ಸೆಂಟ್ರಲ್-ಗಾಂಧಿನಗರ ರಾಜಧಾನಿ ವಂದೇ ಭಾರತ್ ಎಕ್ಸ್‌ಪ್ರೆಸ್ ಚಾಲನೆಯಲ್ಲಿರುವ ಕಾರಣ ಅನೇಕ ರೈಲುಗಳ ಬದಲಾವಣೆ ಮಾಡುವುದು ಅನಿವಾರ್ಯ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ಕೊಟ್ಟಿದ್ದಾರೆ.
ಪಶ್ಚಿಮ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿರುವ ಸುಮಿತ್ ಠಾಕೂರ್“ ರೈಲಿನ ಸಮಯದಲ್ಲಿ ಕೆಲವೇ ನಿಮಿಷಗಳ ಬದಲಾವಣೆ ಮಾತ್ರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಹೊಸ ವೇಳಾಪಟ್ಟಿ ಹಾಗೂ ಹೆಚ್ಚಿನ ಮಾಹಿತಿಯನ್ನ ನೀಡಲಾಗುವುದು. ರೈಲು ಸಂಚಾರ ಸುಗಮವಾಗಲು ಈ ಕ್ರಮ ತೆಗೆದುಕೊಳ್ಳಲಾಗಿದೆ“ ಎಂದು ತಿಳಿಸಿದರು.
ಮುಂಬೈ ಸೆಂಟ್ರಲ್-ಅಹಮದಾಬಾದ್ ಗುಜರಾತ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಹೌರಾ-ಅಹಮದಾಬಾದ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಬಾಂದ್ರಾ ಟರ್ಮಿನಸ್-ಗೋರಖ್‌ಪುರ ಹಮ್ಸಾಫರ್ ಎಕ್ಸ್‌ಪ್ರೆಸ್ ಮತ್ತು ಬಾಂದ್ರಾ ಟರ್ಮಿನಸ್-ರಾಮ್‌ನಗರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಇವುಗಳ ಸಮಯವನ್ನು ಈಗಾಗಲೇ ಬದಲಾಯಿಸಲಾಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ಭಾರತದ ಪ್ರಮುಖ ನಗರಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ. ಪ್ರಯಾಣಕ್ಕೆ ಕಡಿಮೆ ಸಮಯ ತೆಗೆದುಕೊಳ್ಳುವಂತಹ ರೈಲಾಗಿದೆ. ಈ ರೈಲನ್ನು ಐದು ಆಯಕಟ್ಟಿನ ಮಾರ್ಗಗಳಲ್ಲಿ ಉದ್ಘಾಟನೆ ಮಾಡಲಾಗಿದೆ. ಇವೆಲ್ಲವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದು ವಿಶೇಷವಾಗಿದೆ.
ಕೆಲವೇ ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಭೇಟಿ ನೀಡಿದ್ದ ಪ್ರದಾನಿ ಮೋದಿ ಮೈಸೂರು-ಚೆನ್ನೈ ಮಾರ್ಗದಲ್ಲಿ ಚಲಿಸುವ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲನ್ನು ಇದೇ ನವೆಂಬರ್ 12ರಂದು ಉದ್ಘಾಟಿಸಿದ್ದರು. ಈ ವಂದೇ ಭಾರತ್ ರೈಲಿನ ವಿಶೇಷತೆ ಏನಂದರೆ, ಇದರ ಗರಿಷ್ಠ ವೇಗ ಗಂಟೆಗೆ 180 ಕಿಮೀ ಎಂದು ರೈಲು ಇಲಾಖೆ ಹೇಳಿದೆ.