ಬೆಂಗಳೂರು: ಶಿರೂರು ಗುಡ್ಡ ಕುಸಿತ ಬೆನ್ನಲ್ಲೇ ರಾಜ್ಯ ಸರ್ಕಾರ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಇರುವ ಅನಧಿಕೃತ ಹೋಂ ಸ್ಟೇ, ರೆಸಾರ್ಟ್, ತೋಟಗಳನ್ನು ತೆರವು ಮಾಡುವಂತೆ ಆದೇಶ ನೀಡಿದೆ.
ಎಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂರಕ್ಷಣಾ ಕಾಧಿಕಾರಿಗಳಿಗೆ ಪತ್ರ ಬರೆದಿರುವ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಭೂ ದಾಖಲೆಗಳ ಬಗ್ಗೆ ವಸ್ತುನಿಷ್ಠ ಮಾಹಿತಿ ಸಲ್ಲಿಸುವಂತೆ ಸೂಚಿಸಿದ್ದಾರೆ.
2015ರ ಬಳಿಕ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಅರಣ್ಯ ಒತ್ತುವರಿ ಮಾಡಿ ನಿರ್ಮಿಸಿರುವ ಅಕ್ರಮ ರೆಸಾರ್ಟ್, ಹೋಂ ಸ್ಟೇ, ತೋಟ, ಬಡಾವಣೆ ಹಾಗೂ ಇನ್ನಿತರ ಅರಣ್ಯ ಒತ್ತುವರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಗಮನಹರಿಸಿ, ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ.
ಪ್ರಕೃತಿದತ್ತವಾದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಗುಡ್ಡ, ಬೆಟ್ಟಗಳನ್ನು ಕಡಿದು ಹೋಂ ಸ್ಟೇ, ಕಾಫಿ ತೋಟ, ರೆಸಾರ್ಟ್, ಬಡಾವಣೆ ನಿರ್ಮಾಣ ಮಾಡುತ್ತಿರುವುದರಿಂದ ಹಾಗೂ ಬೇರಿನಿಂದ ಗಟ್ಟಿಯಾಗಿ ಮಣ್ಣು ಹಿಡಿದಿರುವ ಮರಗಳನ್ನು ಕಡಿತಲೆ ಮಾಡುವುದರಿಂದ, ಅವೈಜ್ಞಾನಿಕವಾಗಿ ಗುಡ್ಡಗಳನ್ನು ಕತ್ತರಿಸಿ ರಸ್ತೆ ನಿರ್ಮಾಣ ಮಾಡುತ್ತಿರುವುದರಿಂದ ಭೂಕುಸಿತ, ಗುಡ್ಡ ಕುಸಿತದಂತಹ ದುರಂತಗಳು ಸಂಭವಿಸುತ್ತವೆ ಎಂದು ತಜ್ಞರು ನೀಡಿರುವ ಅಭಿಪ್ರಾಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರ ಈ ಮಹತ್ವದ ಆದೇಶ ಹೊರಡಿಸಿದೆ.
ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ, ಶಿವಮೊಗ್ಗ, ಚಾಮರಾಜನಗರ ಸೇರಿದಂತೆ ಪಶ್ಚಿಮಘಟ್ಟ ಪ್ರದೇಶಗಳಲ್ಲಿ 2015ರ ಬಳಿಕ ನಿರ್ಮಾಣವಾಗಿರುವ ಅನಧಿಕೃತ ಹೋಂ ಸ್ಟೇ, ತೋಟ, ರೆಸಾರ್ಟ್, ಬಡಾವಣೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.