ನಾಡಿಯಾ (ಪಶ್ಚಿಮ ಬಂಗಾಳ): ಕೆಲವೊಮ್ಮೆ ವೈದ್ಯಕೀಯ ಲೋಕದಲ್ಲಿ ಎಂದೂ ಕೇಳರಿಯದ ವಿಚಿತ್ರಗಳು ನಡೆಯುತ್ತವೆ. ಅಂಥದ್ದೇ ಒಂದು ಘಟನೆ ಪಶ್ಚಿಮ ಬಂಗಾಳದ ನಾಡಿಯಾದಲ್ಲಿ ನಡೆದಿದೆ.
ಇಲ್ಲಿರುವ ಆಸ್ಪತ್ರೆಯೊಂದರಲ್ಲಿ ಎರಡು ಗರ್ಭಾಶಯವನ್ನು ಹೊಂದಿರುವ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಅಪರೂಪದಲ್ಲಿ ಅಪರೂಪ ಪ್ರಕರಣ ಇದಾಗಿದೆ. ನಾಡಿಯಾ ಜಿಲ್ಲೆಯ ಶಾಂತಿಪುರ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಎರಡು ಗರ್ಭಕೋಶ ಹೊಂದಿರುವುದು ವೈದ್ಯ ಲೋಕಕ್ಕೆ ಸವಾಲು ಎನ್ನಲಾಗಿತ್ತು. ಆದರೂ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸ್ತ್ರೀ ರೋಗ ತಜ್ಞೆ ಡಾ ಪವಿತ್ರ ಬೆಪರಿ ನೇತೃತ್ವದಲ್ಲಿ ಈ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.
ತಾಯಿ ಮತ್ತು ಅವಳಿ ಮಕ್ಕಳು ಕೂಡ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಎರಡು ಗರ್ಭಕೋಶವನ್ನು ಹೊಂದಿರುವ ಪ್ರಕರಣಗಳು ವೈದ್ಯಕೀಯ ಲೋಕದ ವಿಸ್ಮಯವೇ ಸರಿ. ಇದುವರೆಗೂ ಈ ರೀತಿಯ 17 ಪ್ರಕರಣಗಳು ಜಗತ್ತಿನಲ್ಲಿ ಕಂಡು ಬಂದಿದೆ. ಇದರಲ್ಲಿ ಮೂರು ಪ್ರಕರಣಗಳು ಭಾರತದಲ್ಲಿ ವರದಿಯಾಗಿದೆ. ವಿಶೇಷ ಎಂದರೆ, ಎರಡು ಪ್ರಕರಣಗಳು ಪಶ್ಚಿಮ ಬಂಗಾಳದಲ್ಲೇ ವರದಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ.