ಕೋಲ್ಕತಾ: ಬ್ರಹ್ಮನನ್ನು ಪ್ರಥಾನ ದೇವತೆಯಾಗಿ ಆರಾಧಿಸುವ ಸಂಪ್ರದಾಯ ಭಾರತದಲ್ಲಿ ವಿರಳವಾಗಿದೆ. ಬ್ರಹ್ಮನಿಗೆ ಮೀಸಲಾದ ದೇವಸ್ಥಾನಗಳೂ ನಮ್ಮಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿವೆ. ರಾಜಸ್ಥಾನದ ಪುಷ್ಕರದಲ್ಲಿರುವ ಬ್ರಹ್ಮ ದೇವಸ್ಥಾನವು ಇತಿಹಾಸ ಪ್ರಸಿದ್ಧವಾಗಿದೆ. ಭಾರತದಿಂದ ಹೊರಗೆ ಬ್ಯಾಂಕಾಕ್ ನಲ್ಲಿ ಇರವನ್ ದೇವಸ್ಥಾನವಿದೆ.
ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಬರನಾದಲ್ಲಿರುವ ಬ್ರಹ್ಮದೇವಾಲಯ ಅಷ್ಟೇನೂ ಪ್ರಸಿದ್ಧವಲ್ಲ. ಆದರೆ, ಈ ಕುಗ್ರಾಮದ ಜನರು ಸುಮಾರು 200 ವರ್ಷಗಳಿಂದ ಇಲ್ಲಿ ಬ್ರಹ್ಮಪೂಜೆಯನ್ನು ಆಯೋಜಿಸುತ್ತಿದ್ದಾರೆ. ಸಭಲ್‌ಪುರ್ ಅಗ್ನಿವೀಣಾ ಕ್ಲಬ್ ಇದನ್ನು ಆಯೋಜಿಸುತ್ತಿದೆ.
ಹಲವು ವರ್ಷಗಳ ಹಿಂದೆ, ಈ ಗ್ರಾಮದಲ್ಲಿ ಒಂದಾದ ಮೇಲೆ ಒಂದರಂತೆ ಮನೆಗಳು ಬೆಂಕಿಗೆ ಆಹುತಿಯಾಗಿ, ಹಲವು ಜನರು, ದನ-ಕರುಗಳು ಪ್ರಾಣಬಿಟ್ಟವಂತೆ, ಗ್ರಾಮವನ್ನು ಬೆಂಕಿಯಿಂದ ರಕ್ಷಿಸುವಂತೆ ತಮಗೆ ಆಶ್ರಯ ಕೊಟ್ಟ ಸನ್ಯಾಸಿಯನ್ನು ಗ್ರಾಮಸ್ಥರು ಬೇಡಿಕೊಂಡರಂತೆ. ಸನ್ಯಾಸಿಯ ಸಲಹೆಯಂತೆ ಗ್ರಾಮಸ್ಥರು ಪ್ರಜಾಪತಿ ಬ್ರಹ್ಮನ ಆರಾಧನೆಯನ್ನು ಪ್ರಾರಂಭಿಸಿದರಂತೆ. ಇದು ಬ್ರಹ್ಮಪೂಜೆಗೆ ಇರುವ ಹಿನ್ನೆಲೆ.
ಕೋವಿಡ್-19 ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದೀಚೆಗೆ ಈ ಪೂಜೆಯನ್ನು ಸಂಕ್ಷಿಪ್ತವಾಗಿ ನಡೆಸಲಾಗುತ್ತಿದೆ.ಈ ವರ್ಷ ಮತ್ತೆ ಅದ್ದೂರಿಯಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಹಿತವಾಗಿ ಆಯೋಜನೆಯಾಗುತ್ತಿದೆ.
ಆದರೆ, ಗ್ರಾಮದಲ್ಲಿ ಬೆಂಕಿ ಅವಘಡವುಂಟಾಗಲು ಕಾರಣವೇನು? ವಿಚಾರವಾದಿಗಳ ಪ್ರಕಾರ ಅತಿಯಾದ ಧಗೆಯಿಂದ ಕಟ್ಟಿಗೆ ಮತ್ತು ಒಣಹುಲ್ಲಿಗೆ ಬೆಂಕಿ ಹೊತ್ತಿಕೊಂಡಿರಬೇಕು. ಆದರೆ, ಬ್ರಹ್ಮನ ಕೋಪಕ್ಕೆ ಗ್ರಾಮವು ಬೆಂಕಿಗೆ ಆಹುತಿಯಾಗಿತ್ತು. ಪೂಜೆಯಿಂದಲೇ ಆತನನ್ನು ಸಂತೃಪ್ತಿಗೊಳಿಸಲು ಸಾಧ್ಯವೆಂದು ಗ್ರಾಮಸ್ಥರು ನಂಬುತ್ತಾರೆ.
ಮೊದಲು ಇಲ್ಲಿ ಮಣ್ಣಿನ ಗೋಡೆಯ ಸಣ್ಣ ದೇವಸ್ಥಾನವಿತ್ತು. ಈಗ ಶಾಶ್ವತ ಮಂದಿರದ ನಿರ್ಮಾಣವಾಗಿದೆ. ಪೂಜೆಯ ಸಂದರ್ಭದಲ್ಲಿ ಅಗ್ನಿಯನ್ನು ಸಂಪ್ರೀತಗೊಳಿಸಲು ಒಂದು ವಿಶೇಷ ಯಜ್ಞವನ್ನೂ ಮಾಡಲಾಗುತ್ತಿದೆ. ಸುತ್ತಲಿನ ಹಲವು ಗ್ರಾಮಗಳಿಂದಲೂ ಜನರು ದಾಂಗುಡಿಯಿಟ್ಟು, ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ವರ್ಷ ಈ ಸಂಭ್ರಮ ಇನ್ನಷ್ಟು ಹೆಚ್ಚಾಗಿದೆ.