ಅಪಘಾತದಲ್ಲಿ ಸಾವನ್ನಪ್ಪಿದ ಶ್ವಾನಕ್ಕೆ ವಿಶೇಷ ರೀತಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದ ಘಟನೆ ಪಶ್ಚಿಮ ಬಂಗಾಳದ ಬಿರ್ಘಮ್ನ ಚಿಂಪೈ ಗ್ರಾಮದಲ್ಲಿ ನಡೆದಿದೆ.
9 ವರ್ಷ ಪ್ರಾಯದ ಟಾಮಿ ಎಂಬ ಹೆಸರಿನ ಶ್ವಾನವು ಜೂನ್ 28ರಂದು ಟ್ರಕ್ ಅಡಿಯಾಗಿ ಸಾವನ್ನಪ್ಪಿತ್ತು. ವಯಸ್ಸಾದ ಕಾರಣದಿಂದ ಟಾಮಿಗೆ ಸರಿಯಾಗಿ ಕಣ್ಣು ಕಾಣಿಸುತ್ತಿರಲಿಲ್ಲ. ಈ ಶ್ವಾನವು ಗ್ರಾಮದ ತೃಣಮೂಲ ಕಾಂಗ್ರೆಸ್ ಕಚೇರಿಯಲ್ಲೇ ವಾಸ್ತವ್ಯ ಹೂಡಿತ್ತು. ಈ ಶ್ವಾನವನ್ನ ಎಲ್ಲರೂ ತುಂಬಾನೇ ಪ್ರೀತಿಸುತ್ತಿದ್ದರು.
ಶ್ವಾನದ ಸಾವಿನಿಂದ ನೊಂದ ಶ್ವಾನದ ಪೋಷಕರು ಇದೀಗ ಟಾಮಿ ಸವಿನೆನಪಿನಲ್ಲಿ ಸಣ್ಣ ಕಾರ್ಯಕ್ರಮವನ್ನ ಏರ್ಪಡಿಸಿದ್ದರು. 50ಜನರನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಿ ಶ್ವಾನದ ಜೊತೆ ಕಳೆದ ಅಮೂಲ್ಯ ಕ್ಷಣವನ್ನ ಮೆಲುಕು ಹಾಕಿದ್ದಾರೆ. ದೇಣಿಗೆ ಸಂಗ್ರಹದ ಮೂಲಕ ಬಂದ ಹಣದಲ್ಲಿ ಕಾರ್ಯಕ್ರಮಕ್ಕೆ ಬಂದವರಿಗೆ ಊಟವನ್ನ ಬಡಿಸಲಾಗಿತ್ತು. ಪಕ್ಷದ ಕಾರ್ಯಕರ್ತರು, ಗ್ರಾಮದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರದಿಗಳ ಪ್ರಕಾರ, 9 ವರ್ಷದ ಹಿಂದೆ ಪುಟ್ಟ ನಾಯಿ ಮರಿಯು ಟಿಎಂಸಿ ಪಕ್ಷದ ಕಚೇರಿಯಲ್ಲಿ ವಾಸ್ತವ್ಯ ಹೂಡಲು ಆರಂಭಿಸಿತ್ತು. ಪುಟ್ಟ ಮರಿಗೆ ಟಿಎಂಸಿ ಪಕ್ಷದ ಕಚೇರಿಯೂ ಆಶ್ರಯ ನೀಡಿತ್ತು. ಅಂದಿನಿಂದ ಈ ಟಾಮಿ ಪಕ್ಷಕ್ಕೆ ಬರುವ ಪ್ರತಿಯೊಬ್ಬರ ಪ್ರೀತಿಯ ಶ್ವಾನವಾಗಿತ್ತು.