ನವದೆಹಲಿ: ಒಮಿಕ್ರಾನ್ ಆತಂಕದ ನಡುವೆ ಜನವರಿ 3 ರಿಂದ ಜಾರಿಗೆ ಬರುವಂತೆ ಯುನೈಟೆಡ್ ಕಿಂಗ್ ಡಮ್ ನಿಂದ ಕೋಲ್ಕತ್ತಾಗೆ ಎಲ್ಲಾ ನೇರ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ.
ಜಾಗತಿಕವಾಗಿ ಒಮಿಕ್ರಾನ್ ಪ್ರಕರಣಗಳಲ್ಲಿ ಆತಂಕಕಾರಿ ಏರಿಕೆಯ ನಡುವೆ ಈ ಕ್ರಮ ಕೈಗೊಳ್ಳಲಾಗಿದೆ. ಜನವರಿ 3, 2022 ರಿಂದ, ಅಪಾಯವಿಲ್ಲದ ದೇಶಗಳಿಂದ ಪಶ್ಚಿಮ ಬಂಗಾಳಕ್ಕೆ ಬರುವ ಎಲ್ಲಾ ಪ್ರಯಾಣಿಕರು ತಮ್ಮ ವೆಚ್ಚದಲ್ಲಿ ಕಡ್ಡಾಯವಾಗಿ COVID-19 ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಪ್ರಯಾಣಿಕರು ಪರೀಕ್ಷೆಯನ್ನು ಮುಂಗಡ ಕಾಯ್ದಿರಿಸಬೇಕಾಗುತ್ತದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಕೋಲ್ಕತ್ತಾದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿವೆ ಎಂದು ಹೇಳಿದ್ದರು. ಯುಕೆಯಿಂದ ವಿಮಾನಗಳಲ್ಲಿ ಬರುವ ಜನರಲ್ಲಿ ಹೆಚ್ಚಿನ ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗುತ್ತಿವೆ. ಒಮಿಕ್ರಾನ್ ವಾಹಕಗಳು ಅಂತರಾಷ್ಟ್ರೀಯ ವಿಮಾನಗಳ ಮೂಲಕ ಬರುತ್ತಿರುವುದು ಸತ್ಯವಾಗಿದೆ. ಒಮಿಕ್ರಾನ್ ಪ್ರಕರಣಗಳು ಹೆಚ್ಚಿರುವ ದೇಶಗಳಿಂದ ವಿಮಾನಗಳ ಮೇಲೆ ನಿರ್ಬಂಧಗಳನ್ನು ಹೇರುವ ಬಗ್ಗೆ ಕೇಂದ್ರವು ನಿರ್ಧರಿಸಬೇಕು ಎಂದು ದೀದೀ ಹೇಳಿದ್ದಾರೆ.