ಕೊಲ್ಕೊತ್ತಾ: ಪಶ್ಚಿಮ ಬಂಗಾಳದಲ್ಲಿ ಶಾಲಾ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಕಾರ್ಯಾಚರಣೆ ನಡೆಸಿದ ಇಡಿ ಅಧಿಕಾರಿಗಳು 20 ಕೋಟಿ ರೂ.ಗೂ ಅಧಿಕ ನಗದು ಜಪ್ತಿ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ನಿವಾಸದಲ್ಲಿ ಅಧಿಕಾರಿಗಳು ಭಾರೀ ಹಣ ಜಪ್ತಿ ಮಾಡಿದ್ದಾರೆ. ಮನೆಯಲ್ಲಿದ್ದ ದುಡ್ಡಿನ ರಾಶಿ ಕಂಡು ದಾಳಿ ಮಾಡಿದ ಅಧಿಕಾರಿಗಳೇ ದಂಗಾಗಿದ್ದಾರೆ. ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ ಮತ್ತು ಪಶ್ಚಿಮ ಬಂಗಾಳದ ಪ್ರಾಥಮಿಕ ಶಿಕ್ಷಣ ಮಂಡಳಿಯಲ್ಲಿ ನಡೆದ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ವಿವಿಧೆಡೆ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಪಾರ್ಥ ಚಟರ್ಜಿ ಮಾತ್ರವಲ್ಲದೇ ಇನ್ನೂ ಹಲವು ಸಚಿವರು, ಶಾಸಕರು, ಅಧಿಕಾರಿಗಳು ಹಾಗೂ ಏಜೆಂಟರ ಮನೆ ಮೇಲೆ ದಾಳಿ ನಡೆಸಲಾಗಿದೆ.
ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ, ಪಾರ್ಥ ಚಟರ್ಜಿಯವರ ನಿಕಟವರ್ತಿಯಾಗಿರುವ ಅರ್ಪಿತಾ ಮುಖರ್ಜಿಯವರ ವಸತಿ ಆವರಣದಿಂದ ಸುಮಾರು 20 ಕೋಟಿ ರೂಪಾಯಿ ಮೊತ್ತದ ಬೃಹತ್ ಹಣವನ್ನು ಇಡಿ ವಶಪಡಿಸಿಕೊಂಡಿದೆ. ಈ ನಗದು ಎಸ್‌ಎಸ್‌ಸಿ ಹಗರಣದ ಅಪರಾಧದ ಆದಾಯ ಎಂದು ಶಂಕಿಸಲಾಗಿದೆ. ನಗದು ಎಣಿಕೆ ಯಂತ್ರಗಳ ಮೂಲಕ ನಗದು ಎಣಿಕೆಗೆ ಶೋಧ ತಂಡ ಬ್ಯಾಂಕ್ ಅಧಿಕಾರಿಗಳ ನೆರವು ಪಡೆದಿದೆ.
ಗ್ರೂಪ್ ‘ಸಿ’ ಮತ್ತು ‘ಡಿ’ ಸಿಬ್ಬಂದಿ, IX-XII ತರಗತಿಗಳ ಸಹಾಯಕ ಶಿಕ್ಷಕರು ಮತ್ತು ಪ್ರಾಥಮಿಕ ಶಿಕ್ಷಕರ ನೇಮಕಾತಿ ಹಗರಣದ ಬಗ್ಗೆ ತನಿಖೆ ನಡೆಸುವಂತೆ ಕೊಲ್ಕತ್ತಾ ಹೈಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿದ ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ.