ಮನೆಯೊಂದಕ್ಕೆ ನುಗ್ಗಿದ ಕಳ್ಳರಿಬ್ಬರು, ಚಾಕು ಹಿಡಿದು ಮನೆಯವರನ್ನು ಬೆದರಿಸಿ ಚಿನ್ನ, ಹಣವನ್ನು ದೋಚಿದ್ದಾರೆ. ಈ ವೇಳೆ ತಾನು ದೋಚುತ್ತಿರುವುದು ತನಗೆ ಅಕ್ಷರ ಕಲಿಸಿದ ಶಿಕ್ಷಕರ ಮನೆಯಲ್ಲಿ ಎಂದು ಗೊತ್ತಾದ ಕಳ್ಳನೊಬ್ಬ, ಅವರ ಪಾದಕ್ಕೆ ಸಾಷ್ಟಾಂಗ ನಮಸ್ಕರಿಸಿ ಎಸ್ಕೇಪ್ ಆಗಿದ್ದಾನೆ.
ಹೌದು, ಇಂಥದ್ದೊಂದು ವಿಲಕ್ಷಣ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ರಾಯ್ ಎಂಬುವವರು ನಿವೃತ್ತ ಶಿಕ್ಷಕರಾಗಿದ್ದು, ಇತ್ತೀಚೆಗೆ ಚಿಕಿತ್ಸೆಗಾಗಿ ಬೆಂಗಳೂರಿಗೆ ಭೇಟಿ ನೀಡಿ ಹಿಂದಿರುಗಿದ್ದರು, ಸೋಮವಾರದಂದು ತಮ್ಮ ಫ್ಲಾಟ್ ನಲ್ಲಿ ಸಹೋದರನ ಜೊತೆ ತಂಗಿದ್ದ ಅವರಿಗೆ ಮನೆಯ ಮುಖ್ಯದ್ವಾರದಿಂದ ಯಾರೋ ಬಂದಂತಾಯ್ತು. ಯಾರೆಂದು ನೋಡೋವಷ್ಟರಲ್ಲಿ ದರೋಡೆಕೋರರಿಬ್ಬರು ಚಾಕು ಹಿಡಿದುಕೊಂಡು ಒಳನುಗ್ಗಿದ್ದಾರೆ.
ರಾಯ್ ಅವರ ಸಹೋದರ ಅವರನ್ನು ತಡೆಯಲು ಪ್ರಯತ್ನಿಸಿದಾಗ, ದರೋಡೆಕೋರರು ಅವರನ್ನು ಶೌಚಾಲಯದ ಒಳಗೆ ತಳ್ಳಿ, ಬಾಗಿಲು ಹಾಕಿದ್ದಾರೆ.
ರಾಯ್ ಅವರ ಬಳಿ ಮನೆಯಲ್ಲಿರೋ ಹಣ ಮತ್ತು ಆಭರಣಗಳನ್ನು ಕೊಡುವಂತೆ ಬೆದರಿಕೆ ಹಾಕಿದ್ದಾರೆ. ಮನೆಯಲ್ಲಿದ್ದ ಹಣ, ಮೊಬೈಲ್ ಗಳನ್ನು ರಾಯ್ ಕಳ್ಳರಿಗೆ ನೀಡಿದ್ದಾರೆ. ಈ ವೇಳೆ ಕಳ್ಳನೊಬ್ಬನಿಗೆ ತಾನು ಲೂಟಿ ಮಾಡುತ್ತಿರುವುದು ತನ್ನ ಗುರುಗಳ ಮನೆಯಲ್ಲಿ ಎಂಬುದು ಗೊತ್ತಾಗಿದೆ.
ಈ ವೇಳೆ ದರೋಡೆಕೋರ ಶಿಕ್ಷಕರಿಗೆ ಗೌರವವನ್ನು ತೋರಿಸುವ ಇಂಗಿತದಲ್ಲಿ ನಮಸ್ಕರಿಸಿದ್ದಾನೆ. ಈ ವೇಳೆ ಶಿಕ್ಷಕರು ಬೆಳಿಗ್ಗೆ ದಿನಸಿ ಮತ್ತು ಮಾತ್ರೆಗಾಗಿ ಸ್ವಲ್ಪ ಹಣವನ್ನು ಹಿಂತಿರುಗಿಸುವಂತೆ ಕೇಳಿಕೊಂಡಿದ್ದಾರೆ. ನಂತರ ದರೋಡೆಕೋರ 200 ರೂಪಾಯಿ ಮತ್ತು ಮೊಬೈಲ್ ಫೋನ್ ಅನ್ನು ಶಿಕ್ಷಕರ ಪಾದದ ಮೇಲೆ ಎಸೆದು ಎಸ್ಕೇಪ್ ಆಗಿದ್ದಾನೆ.