ಉಕ್ರೇನ್ ಮೇಲೆ ರಷ್ಯಾದಿಂದ ಆಕ್ರಮಣ ನಡೆದು 20 ದಿನಗಳು ಕಳೆಯುತ್ತಿವೆ. ಲಕ್ಷಾಂತರ ಜನರು ವಲಸೆ ಹೋಗಾಗಿದೆ. ಸಾವಿರಾರು ಜನರು ರಷ್ಯಾ ಸೇನೆಯ ಬಾಂಬ್ ಮತ್ತು ಶೆಲ್ ದಾಳಿಗೆ ಜೀವ ತೆತ್ತಿದ್ದಾರೆ. ಹುಸಿ ಪ್ರತಿಷ್ಠೆ, ಪ್ರಾಬಲ್ಯ ಮೆರೆಯುವ ಸಲುವಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆರಂಭಿಸಿದ ಈ ರಕ್ತದಾಹದ ಸಮರಕ್ಕೆ ಅದೆಷ್ಟೋ ಮಕ್ಕಳು ಜೀವ ಬಿಟ್ಟಿದ್ದಾರೆ.
ತಾಯಿಯರು ಕರುಳು ಹಿಂಡುವಷ್ಟು ನರಳಾಡಿದ್ದಾರೆ. ಕುಟುಂಬಗಳು ದಿಕ್ಕಾಪಾಲಾಗಿವೆ. ಈ ನಡುವೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಾತ್ರ ದಿಟ್ಟತನ ಪ್ರದರ್ಶಿಸಿ ಉಕ್ರೇನ್‌ನಲ್ಲಿ ಸಿಲುಕಿದ್ದ ಸುಮಾರು 18 ಸಾವಿರ ಭಾರತೀಯರು ಹಾಗೂ ನೆರೆ ದೇಶದವರನ್ನು ರಕ್ಷಿಸಿಕೊಂಡು ತಾಯ್ನಾಡಿಗೆ ಕರೆತಂದಿದೆ. ಇದು ’ಆಪರೇಷನ್ ಗಂಗಾ’ದ ಯಶಸ್ಸು. ಭಾರತದ ಜಾಗತಿಕ ಪ್ರಾಬಲ್ಯ ಹೆಚ್ಚುತ್ತಿರುವುದರ ಸಂಕೇತ.
ಈ ಆಪರೇಷನ್ ಗಂಗಾ ಭಾಗವಾಗಿ ನೂರಾರು ವಿಮಾನಗಳು ಭಾರತ-ಉಕ್ರೇನ್ ನಡುವೆ ಹಾರಾಟ ನಡೆಸಿದವು. ಅದು ಕೂಡ ಎಡೆಬಿಡದೆ, ಒಂದಾದ ಮೇಲೊಂದರಂತೆ ಉಕ್ರೇನ್ ಗಡಿಯಲ್ಲಿನ ರಾಷ್ಟ್ರಗಳಾದ ಪೊಲೆಂಡ್, ಹಂಗೇರಿ, ರೊಮೆನಿಯಾ, ಸ್ಲೊವಾಕಿಯಾದಿಂದ ಭಾರತಕ್ಕೆ ಸರಕಾರಿ ವೆಚ್ಚದಲ್ಲಿ ಹಾರಾಟ ನಡೆಸಿ ಭರದ ರಕ್ಷಣಾ ಕಾರ್ಯಾಚರಣೆ ಯಶಸ್ವಿಗೊಳಿಸಿದವು.
ಈ ಪೈಕಿ ಪಶ್ಚಿಮ ಬಂಗಾಳದ ಪೈಲೆಟ್ ’ಮಹಾಶ್ವೇತ’ ಎಂಬವರು ಉಕ್ರೇನ್‌ನಿಂದ ಭಾರತೀಯರನ್ನು ಕರೆತರುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದು ವಿಶೇಷ. ಈ ಮಹಿಳಾ ಪೈಲೆಟ್ ಪೂರ್ಣ ಹೆಸರು ಮಹಾಶ್ವೇತ ಚಕ್ರವರ್ತಿ ಅವರು ಫೆ.27 ರಿಂದ ಮಾ.7ರ ನಡುವೆ ಪೊಲೆಂಡ್‌ನಿಂದ 4 ವಿಮಾನಗಳು ಮತ್ತು ಹಂಗೇರಿ 2 ವಿಮಾನಗಳನ್ನು ಭಾರತಕ್ಕೆ ಹಾರಿಸಿದರು. ಏರ್‌ಬಸ್ ಎ-320 ವಿಮಾನ ಮಹಾಶ್ವೇತ ನೇತೃತ್ವದಲ್ಲಿ ರಕ್ಷಣೆಯಲ್ಲಿ ನಿರತವಾಯಿತು. ಆಕೆಯು ನಿತ್ಯ 13-14 ಗಂಟೆಗಳು ವಿಮಾನ ಹಾರಾಟ ನಡೆಸಿದ್ದಾರೆ. ಈ ಮೂಲಕ 800 ಭಾರತೀಯರನ್ನು ಉಕ್ರೇನ್‌ನಿಂದ ಸುರಕ್ಷಿತವಾಗಿ ಕರೆತಂದ ಶ್ರೇಯಕ್ಕೆ ಪಾತ್ರರಾಗಿದ್ದಾರೆ.