ಅದು ಪಶ್ಚಿಮ ಬಂಗಾಳದ ಪುಟ್ಟ ಹಳ್ಳಿ. ಆ ಹಳ್ಳಿಗೆ ಹೊಸದಾಗಿ 3 ಕಿಲೋಮೀಟರ್ ರಸ್ತೆಯಾಗ್ತಿದ್ದು ಆ ರಸ್ತೆಗೆ ಅದೇ ಗ್ರಾಮದ ಯುವಕನ ಹೆಸರಿಡಲಾಗಿದೆ. ಇದಕ್ಕೆ ಕಾರಣ ಆ ಯುವಕನ ಯಶೋಗಾಥೆ.
ಪಶ್ಚಿಮ ಬಂಗಾಳದ ಜಲ್ಪೈಗುರಿಯ ದೂರದ ಗ್ರಾಮವಾದ ದೋಷ್ ದರ್ಗಾದ ಮೂರು ಕಿಲೋಮೀಟರ್ ಉದ್ದದ ರಸ್ತೆಗೆ ಹಳ್ಳಿಯ ಶಾಲೆಯಲ್ಲಿ ಓದಿ ಪಿಎಚ್ಡಿ ಪೂರ್ಣಗೊಳಿಸಿದ ಪ್ರತಿಭಾವಂತ ವಿದ್ಯಾರ್ಥಿಯ ಹೆಸರನ್ನು ಇಡಲಾಗಿದೆ.
ಜಿಲ್ಲಾ ಪರಿಷತ್ತಿನ ಉಪಾಧ್ಯಕ್ಷ ದುಲಾಲ್ ದೇಬನಾಥ್ ಅವರು ಸೋಮವಾರ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಿ ವಿದ್ಯಾರ್ಥಿಯ ಹೆಸರನ್ನು ರಸ್ತೆಗೆ ಹೈದರ್ ಅಲಿ ರಸ್ತೆ ಎಂದು ನಾಮಕರಣ ಮಾಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಯುವಕ ಹೈದರ್ ಅಲಿ , ನನ್ನ ಹೆಸರಿನ ರಸ್ತೆಯನ್ನು ಹೊಂದಲು ನನಗೆ ತುಂಬಾ ಗೌರವವಿದೆ. ಆಡಳಿತವು ತನಗಾಗಿ ಈ ಕ್ರಮವನ್ನು ತೆಗೆದುಕೊಳ್ಳುತ್ತದೆಂದು ನಾನು ಎಂದೂ ನಿರೀಕ್ಷಿಸಿರಲಿಲ್ಲವೆಂದು ಹೇಳಿದರು.
ಈ ಗ್ರಾಮದ ನಿರ್ಗತಿಕ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣಕ್ಕೆ ಸಹಾಯ ಮಾಡಲು ನಾನು ಬಯಸುತ್ತೇನೆ. ನಾನು ಉನ್ನತ ವರ್ಗದ ಕುಟುಂಬದಿಂದ ಬಂದವನಲ್ಲ ಆದ್ದರಿಂದ ಬಡತನದ ನೋವನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಎಂದು ಹೈದರ್ ಅಲಿ ಪ್ರತಿಕ್ರಿಯಿಸಿದರು.
ಬಡತನದ ಕುಟುಂಬದಲ್ಲಿ ಹುಟ್ಟಿದ ಹೈದರ್ ಅಲಿ ಮತ್ತು ಅವನ ಕುಟುಂಬವು ಶಿಕ್ಷಣಕ್ಕೆ ಆದ್ಯತೆ ನೀಡಿತು. ಘೋಷ್ಪಾರಾ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭಿಸಿ, ಬೆಲಕೋಬಾ ಮುಡಿಪಾರ ಹೈಸ್ಕೂಲ್ ನಲ್ಲಿ ಪ್ರೌಢಶಾಲಾ ಶಿಕ್ಷಣ ಪೂರೈಸಿದರು. 2019 ರಲ್ಲಿ ಜಾದವ್ಪುರ ವಿಶ್ವವಿದ್ಯಾಲಯದ ಇಂಡಿಯನ್ ಅಸೋಸಿಯೇಷನ್ ಫಾರ್ ದಿ ಕಲ್ಟಿವೇಶನ್ ಆಫ್ ಸೈನ್ಸ್ನಿಂದ ರಸಾಯನಶಾಸ್ತ್ರದಲ್ಲಿ ಹೈದರ್ ಅಲಿ ತಮ್ಮ ಪಿಎಚ್ಡಿ ಮಾಡಿದರು. ಅಲಿ ಅವರ ಸಾಧನೆಗೆ ಆತನ ತಂದೆ ಸೇರಿದಂತೆ ಗ್ರಾಮಸ್ಥರು ಸಂಭ್ರಮಿಸಿದ್ದಾರೆ.