ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪೋರ್ ನಲ್ಲಿ 2010 ರ ಜ್ಞಾನೇಶ್ವರಿ ರೈಲು ಅಪಘಾತದಲ್ಲಿ ಮೃತಪಟ್ಟಿದ್ದ 38 ವರ್ಷದ ವ್ಯಕ್ತಿ 11 ವರ್ಷಗಳ ನಂತರ ಜೀವಂತವಾಗಿ ಪತ್ತೆಯಾಗಿದ್ದಾನೆ. ಸಿಬಿಐ, ಉತ್ತರ ಕೋಲ್ಕತ್ತಾದ ಜೋರ್ಬಗನ್ ಮೂಲದ ಅಮೃತವಾನ್ ಚೌಧರಿ ಎಂಬಾತನನ್ನು ವಶಕ್ಕೆ ಪಡೆದಿದೆ. ಅಪಘಾತದ ಸಮಯದಲ್ಲಿ ಚೌಧರಿ ವಯಸ್ಸು 27 ವರ್ಷವಾಗಿತ್ತು.
ಜ್ಞಾನೇಶ್ವರಿ ರೈಲು ಅಪಘಾತದಲ್ಲಿ ಮೃತಪಟ್ಟವರ ಪಟ್ಟಿಯಲ್ಲಿ ಅಮೃತವಾನ್ ಚೌಧರಿ ಹೆಸರನ್ನು ಸೇರಿಸಲಾಗಿತ್ತು. ಮೇ 28, 2010 ರಂದು, ಮಾವೋವಾದಿಗಳು ಪಶ್ಚಿಮ ಮಿಡ್ನಾಪೋರ್ ನಲ್ಲಿ ಭೀಕರ ಅಪಘಾತವೆಸಗಿದ್ದರು. ಮುಂಬೈಗೆ ತೆರಳಿದ ಜ್ಞಾನೇಶ್ವರಿ ಎಕ್ಸ್ ಪ್ರೆಸ್ ಹಳಿ ತಪ್ಪಿ, ಸರಕು ರೈಲಿಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ 148 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದರು.
ಅಮೃತವಾನ್ ಚೌಧರಿ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರವಾಗಿ ನೀಡಲಾಗಿತ್ತು. ಕೇಂದ್ರ ಸರ್ಕಾರಿ ಉದ್ಯೋಗವನ್ನೂ ನೀಡಲಾಗಿತ್ತು. ಅಮೃತವಾನ್ ಚೌಧರಿ ಸಹೋದರಿ ಪ್ರಸ್ತುತ ಆಗ್ನೇಯ ರೈಲ್ವೆಯಲ್ಲಿ ಕೆಲಸ ಮಾಡ್ತಿದ್ದಾರೆ. ಪರಿಹಾರಕ್ಕಾಗಿ ಹಾಗೂ ಸರ್ಕಾರಿ ನೌಕರಿಗಾಗಿ ಕುಟುಂಬಸ್ಥರು ತಪ್ಪು ದಾರಿ ತುಳಿದಿದ್ದರು ಎನ್ನಲಾಗ್ತಿದೆ. ದೂರಿನ ಮೇಲೆ ತನಿಖೆ ಶುರು ಮಾಡಿದ್ದ ಸಿಬಿಐ ರಹಸ್ಯ ಪತ್ತೆ ಮಾಡಿದೆ. ಅಮೃತವಾನ್ ಚೌಧರಿ ಕುಟುಂಬಸ್ಥರು ಅಧಿಕಾರಿಗಳ ನೆರವಿನಿಂದ ಡಿಎನ್ಎ ಬದಲಿಸಿರುವ ಸಾಧ್ಯತೆಯಿದೆ.