ಕೋಲ್ಕತ್ತಾ: ಕೋವಿಡ್ -19 ಸಾಂಕ್ರಾಮಿಕ ರೋಗ ಇನ್ನೂ ಕೂಡ ತಹಬದಿಗೆ ಬಂದಿಲ್ಲ. ಜನರು ಮನೆಯಿಂದ ಹೊರಹೋಗುವಾಗ ದೈನಂದಿನ ಉಡುಪಿನ ಅಗತ್ಯ ಭಾಗದಂತೆ ಮಾಸ್ಕ್ ಅನ್ನು ಕೂಡ ಧರಿಸುತ್ತಾರೆ. ಇದೀಗ ಮಾಸ್ಕ್ ಗಳಲ್ಲಿ ಹಲವಾರು ರೀತಿಯ ಹೊಸ ಟ್ರೆಂಡ್ ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟವೆ.
ಹೌದು, ಮಹಿಳೆಯರಂತೂ ತಮ್ಮ ಉಡುಪು ಯಾವ ಬಣ್ಣ ಇದೆಯೋ ಅದಕ್ಕೆ ಮ್ಯಾಚಿಂಗ್ ಆಗುವ ಮಾಸ್ಕ್ ಅನ್ನು ಧರಿಸುವುದು ಸಾಮಾನ್ಯವಾಗಿದೆ. ಇದೀಗ ಟ್ರೆಂಡ್ ಸ್ವಲ್ಪ ಬದಲಾಗಿದ್ದು, ಶ್ರೀಮಂತರೂ ಬಹಳ ಕಾಸ್ಟ್ಲಿ ಮಾಸ್ಕ್ ನತ್ತ ಗಮನಹರಿಸುತ್ತಿದ್ದಾರೆ. ಬೆಳ್ಳಿ, ಚಿನ್ನ, ವಜ್ರದ ಹೊದಿಕೆಯ ಮಾಸ್ಕ್ ಗಳು ಜುವೆಲ್ಲರ್ಸ್ ಗಳಲ್ಲಿ ಅಲಂಕರಿಸಿದೆ.
ಇದೀಗ, ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಉದ್ಯಮಿಯೊಬ್ಬರು 5.70 ಲಕ್ಷ ರೂಪಾಯಿ ಮೌಲ್ಯದ ಕಸ್ಟಮೈಸ್ ಮಾಡಿದ ಚಿನ್ನದ ಮಾಸ್ಕ್ ಅನ್ನು ಖರೀದಿಸಿದ್ದಾರೆ. ಆಭರಣ ತಯಾರಕ ಚಂದನ್ ದಾಸ್ ಎಂಬುವವರು ಈ ಮುಖಗವಸನ್ನು ರಚಿಸಿದ್ದಾರೆ. ವರದಿಯ ಪ್ರಕಾರ, ದಾಸ್ 15 ದಿನಗಳಲ್ಲಿ ಸ್ಥಳೀಯ ಉದ್ಯಮಿಯೊಬ್ಬರಿಗೆ 108 ಗ್ರಾಂ ಚಿನ್ನದ ಮುಖಗವಸನ್ನು ರಚಿಸಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ದುರ್ಗಾ ಪೂಜೆಯ ಆಚರಣೆಯ ಸಂದರ್ಭದಲ್ಲಿ, ಉದ್ಯಮಿ ಈ ಚಿನ್ನ ಲೇಪಿತ ಮುಖಗವಸನ್ನು ಧರಿಸಿ ಶ್ರೀಮಂತಿಕೆಯನ್ನು ಪ್ರದರ್ಶಿಸಿದ್ದಾನೆ.
ಮುಖಗವಸಿನ ಚಿತ್ರಗಳನ್ನು ಪತ್ರಕರ್ತ ರಿತುಪರ್ಣ ಚಟರ್ಜಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದರ ಉದ್ದೇಶವೇನು? ಎಂದು ಪ್ರಶ್ನಿಸಿದ್ದಾರೆ. ಪೋಸ್ಟ್ ಗೆ ಪ್ರತಿಕ್ರಿಯಿಸಿದ ನೆಟ್ಟಿಗರು ಶ್ರೀಮಂತಿಕೆಯನ್ನು ಪ್ರದರ್ಶಿಸಿದ ಉದ್ಯಮಿಗೆ ಛೀಮಾರಿ ಹಾಕಿದ್ದಾರೆ.