ತಾವು ರೈಲು ಓಡಿಸಬೇಕೆಂದು ಕನಸು ಕಂಡಿದ್ದ ವ್ಯಕ್ತಿಗೆ ಕನಸು ನನಸು ಮಾಡಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಆದ್ದರಿಂದ ಅವರು ತಮ್ಮ ಮನೆಯಲ್ಲೇ ಒಂದು ಮಿನಿ ರೈಲು ಸಿದ್ಧಪಡಿಸಿ ಗಮನ ಸೆಳೆದಿದ್ದಾರೆ.
ಪಶ್ಚಿಮ ಬಂಗಾಳದ ಸೆರಾಂಪೋರ್ನ ಪ್ರಭಾಸ್ ಆಚಾರ್ಯ ಮನೆಯಲ್ಲಿಯೇ ರೈಲು ನಿರ್ಮಿಸಿದವರಾಗಿದ್ದಾರೆ. ಆಚಾರ್ಯ ಅವರು ರೈಲು ಚಾಲಕರಾಗಲು ಬಾಲ್ಯದಲ್ಲಿಯೇ ಬಯಸಿದ್ದರು. ಆದರೆ ಕುಟುಂಬದ ಆರ್ಥಿಕ ಮುಗ್ಗಟ್ಟಿನಿಂದ ಅವರು ಉನ್ನತ ವ್ಯಾಸಂಗ ಮಾಡಲು ಸಾಧ್ಯವಾಗಲಿಲ್ಲ.
ಆದರೆ, ಅದಮ್ಯ ಇಚ್ಛಾಶಕ್ತಿಯಿಂದ ಆಚಾರ್ಯರು ಈಗ ಚಿಕ್ಕದಾದರೂ ರೈಲನ್ನೇ ಮನೆಗೆ ತಂದಿದ್ದಾರೆ. ಪೂರ್ವ ರೈಲ್ವೆಯ ಲೋಕಲ್ ಟ್ರೈನ್ ಮಾಡೆಲ್ ಈಗ ಆಚಾರ್ಯ ಅವರ ಮನೆಯಲ್ಲಿ ಓಡುತ್ತಿದೆ. ರೈಲು ಎಲ್ಲಿ ನಿಲ್ಲಬೇಕು, ಎಲ್ಲಿ ಹೋಗಬೇಕೆಂದು ಅವರೇ ನಿರ್ಧರಿಸುತ್ತಾರೆ.
ಅವರು ತಯಾರಿಸಿದ ರೈಲು ಸಾಮಾನ್ಯ ರೈಲಿನಲ್ಲಿರುವ ಅನೇಕ ಅಂಶಗಳು ಒಳಗೊಂಡಿದೆ. ಅಪ್ಪರ್ ಹ್ಯಾಂಡಲ್, ಆಸನಗಳು, ಕಿಟಕಿ ಮುಂಭಾಗದ ಬಫರ್ ಮತ್ತು ಸಿಗ್ನಲ್ ದೀಪಗಳು ಸಹ ಇವೆ. ಸಂರ್ಪೂಣವಾಗಿ ಸ್ಟೀಲ್ನಿಂದ ಮಾಡಲ್ಪಟ್ಟಿದೆ ಮತ್ತು ಕಬ್ಬಿಣದ ಚಕ್ರ ಅಳವಡಿಸಲಾಗಿದೆ.
ಆಚಾರ್ಯರ ಕೆಲವು ಮಾಡಲ್ ರೈಲುಗಳು ಖರೀದಿಯೂ ಆಗಿದೆ. ಆದರೆ ಈ ಯೋಜನೆಯನ್ನು ದೊಡ್ಡ ಮಟ್ಟದಲ್ಲಿ ವಾಣಿಜ್ಯೀಕರಣಗೊಳಿಸುವ ಆರ್ಥಿಕ ಸಾಮರ್ಥ್ಯ ಅವರಿಗಿಲ್ಲ.
ಬಿಡುವಿನ ವೇಳೆಯಲ್ಲಿ ಅವರು ಪುರೋಹಿತ ಕೆಲಸವನ್ನು ಮುಂದುವರಿಸುತ್ತಲೇ, ರೈಲು ಉದ್ಯಮದ ಕನಸು ಕಾಣುತ್ತಿದ್ದಾರೆ.