ಕೊಲ್ಕತ್ತಾ: ವಿಶ್ವವಿದ್ಯಾಲಯಗಳು, ಕಾಲೇಜ್ ಕ್ಯಾಂಪಸ್ ಗಳಲ್ಲಿ ರ್ಯಾಗಿಂಗ್ ತಡೆಯಲು ಹೊಸ ತಂತ್ರಜ್ಞಾನ ಅಬಿವೃದ್ಧಿಪಡಿಸುವಂತೆ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದ್ ಬೋಸ್ ಇಸ್ರೋ ವಿಜ್ಞಾನಿಗಳಿಗೆ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಜಾದವ್ ಪುರದ ವಿಶ್ವ ವಿದ್ಯಾಲಯದ ಹಾಸ್ಟೇಲ್ ನಲ್ಲಿ ಪದವಿಪೂರ್ವ ವಿದ್ಯಾರ್ಥಿಯೊಬ್ಬರು ರ್ಯಾಗಿಂಗ್ ಹಾಗೂ ಲೈಂಗಿಕ ಕಿರುಕುಳಕ್ಕೆ ಸಾವನ್ನಪ್ಪಿದ್ದರು. ಈ ಘಟನೆ ಪಶ್ಚಿಮ ಬಂಗಾಳದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಇಂತಹ ಹಲವು ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ವತಃ ರಾಜ್ಯಪಾಲರು ಇಸ್ರೋ ವಿಜ್ಞಾನಿಗಳ ಜೊತೆ ಮಾತುಕತೆ ನಡೆಸಿ, ಹೊಸ ತಂತ್ರಜ್ಞಾನ ಅಭಿವೃದ್ಧಿ ಪಡಿಸುವಂತೆ ಚರ್ಚಿಸಿದ್ದಾರೆ.
ಹೈದರಾಬಾದ್ ಮೂಲದ ಇಸ್ರೋ ಸಂಸ್ಥೆಯೊಂದಿಗೆ ರಾಜ್ಯಪಾಲರು ಚರ್ಚಿಸಿದ್ದು, ಈ ಸಂಸ್ಥೆ ವಿಡಿಯೋ ಅನಾಲಿಟಿಕ್ಸ್, ಇಮೇಜ್ ಮ್ಯಾಚಿಂಗ್ ಸ್ವಯಂ ಚಾಲಿತ ಗುರಿ ಗುರುತಿಸುವಿಕೆ ಹಾಗೂ ರಿಮೋಟ್ ಸೆನ್ಸಿಂಗ್ ನಂತಹ ಬಹುಮೂಲಗಳನ್ನು ಬಳಸಿಕೊಂಡು ಸೂಕ್ತವಾದ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದೆ ಎಂದು ರಾಜ್ಯಪಾಲರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.