ಯೂಟ್ಯೂಬರ್ ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿ ಧ್ರುವ್ ರಾಠಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ವಿಡಿಯೋ ಬದಲು ಪೋಸ್ಟ್ ಕಾರಣಕ್ಕೆ ಧ್ರುವ್ ರಾಠಿ ಚರ್ಚೆಯಲ್ಲಿದ್ದಾರೆ. ಆಗಸ್ಟ್ 9 ರಂದು ಅತ್ಯಾಚಾರದ ನಂತರ ಕೊಲೆಯಾದ ಕೋಲ್ಕತ್ತಾದ ವೈದ್ಯೆಯ ಗುರುತನ್ನು ಧ್ರುವ್ ರಾಠಿ ಬಹಿರಂಗಪಡಿಸಿದ್ದಾರೆ. ಈಗ ಈ ಕಾರಣದಿಂದಾಗಿ ಅವರು ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ.
ಧ್ರುವ್ ರಾಠಿ, ಕೊಲ್ಕತ್ತಾ ವೈದ್ಯೆಯ ಬಗ್ಗೆ ಪೋಸ್ಟ್ ಒಂದನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಧ್ರುವ್ ರಾಠಿ ಅವರು ಜಸ್ಟೀಸ್ ಫಾರ್ ನಿರ್ಭಯಾ-2 ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದರು. ಕೆಲ ಗಂಟೆ ನಂತ್ರ ಧ್ರುವ್ ರಾಠಿ ಪೋಸ್ಟ್ ಡಿಲೀಟ್ ಮಾಡಿದ್ದರು. ಎಕ್ಸ್ ಖಾತೆಯಲ್ಲಿ ಪೋಸ್ಟ್ ಡಿಲೀಟ್ ಮಾಡ್ತಿದ್ದಂತೆ, ಪಶ್ಚಿಮ ಬಂಗಾಳದ ಆಡಳಿತಾರೂಢ ಸರ್ಕಾರಕ್ಕೆ ಹೆದರಿ ಧ್ರುವ್ ರಾಠಿ ಪೋಸ್ಟ್ ಡಿಲೀಟ್ ಮಾಡಿದ್ದಾರೆಂದು ಜನರು ಆರೋಪಿಸಿದ್ದರು.
ಈ ಟೀಕೆ ನಂತ್ರ ಧ್ರುವ್ ರಾಠಿ ಮತ್ತೊಂದು ಪೋಸ್ಟ್ ಹಾಕಿದ್ದಾರೆ. ಹಿಂದಿನ ಪೋಸ್ಟ್ ಡಿಲೀಟ್ ಮಾಡಲು ಕಾರಣವೇನು ಎಂದು ತಿಳಿಸಿದ್ದಾರೆ. ಸಂತ್ರಸ್ತೆಯನ್ನು ನಿರ್ಭಯಾ 2 ಎಂದು ಕರೆಯುವುದು ಸೂಕ್ತವಲ್ಲ ಎಂದು ಕೆಲವರು ಹೇಳಿದ್ದರು. ಈ ಬಗ್ಗೆ ಚಿಂತಿಸಿ ನಂತ್ರ ಪೋಸ್ಟ್ ಡಿಲೀಟ್ ಮಾಡಿದ್ದಾಗಿ ಧ್ರುವ್ ರಾಠಿ ಸ್ಪಷ್ಟನೆ ನೀಡಿದ್ದಾರೆ.
ಈ ಮಧ್ಯೆ, ಹ್ಯಾಶ್‌ಟ್ಯಾಗ್‌ನಲ್ಲಿ ಸಂತ್ರಸ್ತೆಯ ಹೆಸರನ್ನು ಹಾಕಿ ಧ್ರುವ್ ರಾಠಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದನ್ನು ನೋಡಿದ ಬಳಕೆದಾರರು, ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಧ್ರುವ್ ರಾಠಿ ಅವರ ಈ ಪೋಸ್ಟ್ ಬಗ್ಗೆ ವಕೀಲ ಪ್ರಶಾಂತ್ ಉಮ್ರಾವ್, ಅತ್ಯಾಚಾರದ ಸಂತ್ರಸ್ತೆ ಸತ್ತಾಗ ಅಥವಾ ಮಾನಸಿಕವಾಗಿ ಅಸ್ವಸ್ಥರಾಗಿದ್ದಾಗ, ಸಂತ್ರಸ್ತೆಯ ಹೆಸರು ಅಥವಾ ಗುರುತನ್ನು ಆಕೆಯ ಕುಟುಂಬ ಸದಸ್ಯರ ಅನುಮತಿಯಿಲ್ಲದೆ ಬಹಿರಂಗಪಡಿಸಬಾರದು ಎಂದಿದ್ದಾರೆ. ಹ್ಯಾಶ್ಟ್ಯಾಕ್ ನಲ್ಲಿ ಹೆಸರು ಹಾಕಿದ್ದರ ವಿರುದ್ಧ ಅನೇಕರು ಕಮೆಂಟ್ ಮಾಡಿದ್ದಾರೆ. ಆಗಸ್ಟ್ 9 ರಂದು ವೈದ್ಯೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿತ್ತು.