ಕೊಲ್ಕೊತ್ತಾ: ಭವಾನಿಪುರ ಕ್ಷೇತ್ರದ ಉಪಚುನಾವಣೆಗೆ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಮತಾ ಬ್ಯಾನರ್ಜಿ ಸ್ಪರ್ಧಿಸಲಿದ್ದಾರೆ. ಟಿಎಂಸಿ ಭಾನುವಾರ ಅಧಿಕೃತವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಣಕ್ಕಿಳಿಯುವ ಬಗ್ಗೆ ಘೋಷಣೆ ಮಾಡಿದೆ.
ಸಾಂವಿಧಾನಿಕ ಬಿಕ್ಕಟ್ಟನ್ನು ತಪ್ಪಿಸಲು ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಚುನಾವಣಾ ಆಯೋಗವು ಶನಿವಾರ ಉಪಚುನಾವಣೆಯನ್ನು ಘೋಷಿಸಿದೆ. ಇದರೊಂದಿಗೆ ದಕ್ಷಿಣ ಕೋಲ್ಕತ್ತಾದ ಈ ಕ್ಷೇತ್ರದಲ್ಲಿ ಟಿಎಂಸಿಯ ಪ್ರಚಾರ ಈಗಾಗಲೇ ನಡೆದಿದೆ.
ನಂದಿಗ್ರಾಮದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸೋತಿದ್ದ ಮಮತಾ ಬ್ಯಾನರ್ಜಿ ತನ್ನ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ಈ ಉಪಚುನಾವಣೆಯಲ್ಲಿ ಗೆಲ್ಲಬೇಕಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಸಿಪಿಐ(ಎಂ) ನೇತೃತ್ವದ ಲೆಫ್ಟ್ ಫ್ರಂಟ್ ಉಪಚುನಾವಣೆಗೆ ತಮ್ಮ ಅಭ್ಯರ್ಥಿಗಳನ್ನು ಇನ್ನೂ ಘೋಷಿಸಿಲ್ಲ.
ಸೆಪ್ಟೆಂಬರ್ 30 ರಂದು ಮುರ್ಷಿದಾಬಾದ್ ಜಿಲ್ಲೆಯ ಎರಡು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ಈ ವರ್ಷದ ಎಂಟು ಹಂತದ ವಿಧಾನಸಭಾ ಚುನಾವಣೆಗಳಲ್ಲಿ ಮತದಾನ ನಡೆಯದ ಸಂಸರ್‌ಗಂಜ್ ಮತ್ತು ಜಂಗೀಪುರ ಕ್ಷೇತ್ರಗಳಿಗೆ ಅಕ್ಟೋಬರ್ 3 ರಂದು ಮತ ಎಣಿಕೆ ನಡೆಯಲಿದೆ.
ಜಂಗೀಪುರ ಕ್ಷೇತ್ರದಲ್ಲಿ ಜಾಕೀರ್ ಹುಸೇನ್, ಸಂಸರ್‌ಗಂಜ್‌ನಿಂದ ಅಮಿರುಲ್ ಇಸ್ಲಾಂ ಟಿಎಂಸಿ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ. ಹಿರಿಯ ರಾಜಕಾರಣಿ ಸೋವಂದೇಬ್ ಚಟ್ಟೋಪಾಧ್ಯಾಯ ಅವರು ಭವಾನಿಪುರದ ಟಿಎಂಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಮೂಲಕ ರಾಜ್ಯ ವಿಧಾನಸಭೆಯ ಸದಸ್ಯರಾಗಲು ಮಮತಾ ಬ್ಯಾನರ್ಜಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿದ್ದ ನಟ, ರಾಜಕಾರಣಿ ರುದ್ರನಿಲ್ ಘೋಷ್ ಅವರನ್ನು ಭವಾನಿಪುರ ಕ್ಷೇತ್ರದಲ್ಲಿ ಸುಮಾರು 28,000 ಮತಗಳಿಂದ ಚಟ್ಟೋಪಾಧ್ಯಾಯ ಸೋಲಿಸಿದ್ದರು. ಬ್ಯಾನರ್ಜಿ 2011 ರಿಂದ ಎರಡು ಬಾರಿ ಭವಾನಿಪುರದಿಂದ ಗೆದ್ದಿದ್ದರು. ಈ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ನಂದಿಗ್ರಾಮದಲ್ಲಿ ಸ್ಪರ್ಧಿಸಲು ತಮ್ಮ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಆದರೆ, ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಆಪ್ತರಾ ಸುವೇಂದು ಅಧಿಕಾರಿ ಎದುರು ಸೋಲು ಕಂಡಿದ್ದರು. ಸುವೇಂದು ಅಧಿಕಾರಿ ಈಗ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ.
ಭವಾನಿಪುರ ಉಪಚುನಾವಣೆಯ ಅಧಿಸೂಚನೆಯನ್ನು ಸೆಪ್ಟೆಂಬರ್ 6 ರಂದು ಹೊರಡಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭಿಸಲಾಗುವುದು. ಸೆಪ್ಟೆಂಬರ್ 13 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಸೆಪ್ಟೆಂಬರ್ 14 ರಂದು ಪರಿಶೀಲನೆ ನಡೆಯುತ್ತದೆ. ಚುನಾವಣಾ ಕಣದಿಂದ ಹಿಂದೆ ಸರಿಯಲು ಸೆಪ್ಟೆಂಬರ್ 16 ಕೊನೆಯ ದಿನಾಂಕವಾಗಿದೆ.
ಸಿಎಂ ಮಮತಾ ಬ್ಯಾನರ್ಜಿ ಚುನಾವಣೆಯಲ್ಲಿ ನವೆಂಬರ್ 5 ರೊಳಗೆ ರಾಜ್ಯ ಶಾಸಕಾಂಗದ ಸದಸ್ಯರಾಗಬೇಕು. ಹೀಗಾಗಿ ಅವರು ಸಿಎಂ ಸ್ಥಾನ ಉಳಿಸಿಕೊಳ್ಳಲು ಗೆಲ್ಲಲೇಬೇಕಿದೆ.