ಪಶ್ಚಿಮ ಬಂಗಾಳದಲ್ಲಿ ಏಕೋ ಮೋದಿ ವರ್ಚಸ್ಸು, ಕೇಸರಿ ಪಾಳಯದ ಘರ್ಜನೆ ವರ್ಕ್ ಆದಂತೆ ಕಾಣುತ್ತಿಲ್ಲ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ದೀದಿಗೆ ಸೋಲುಣಿಸಿಯೇ ಸಿದ್ಧ ಎಂದಿದ್ದ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಪಡೆಗೆ ಪದೇ ಪದೇ ಆಘಾತ ಎದುರಾಗುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಸಾಕಷ್ಟು ಶಾಸಕರು ಬಿಜೆಪಿಯಿಂದ ಟಿಎಂಸಿಗೆ ಹಾರುತ್ತಿದ್ದಾರೆ. ಕಲಿಗಂಜ್ ಬಿಜೆಪಿ ಶಾಸಕ ಸೌಮೇನ್ ರಾಯ್, ಮುಕುಲ್ ರಾಯ್, ತನ್ಮಯ್ ಘೋಷ್ , ಬಿಸ್ವಜಿತ್ ದಾಸ್ ಸೇರಿದಂತೆ ಸಾಕಷ್ಟು ಕೇಸರಿ ಪಾಳಯದ ನಾಯಕರು ಬಿಜೆಪಿ ಕಡೆಗೆ ಮುಖ ಮಾಡಿದ್ದರು. ಇದೀಗ ಈ ಸಾಲಿಗೆ ರಾಯಗಂಜ್ನ ಬಿಜೆಪಿ ಶಾಸಕ ಕೃಷ್ಣ ಕಲ್ಯಾಣಿ ಕೂಡ ಸೇರಿದ್ದಾರೆ.
ಕಾಮ್ಯಾಕ್ ಬೀದಿಯಲ್ಲಿರುವ ಸೆನೆಟರ್ ಹೋಟೆಲ್ನಲ್ಲಿ ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥಸಾರಥಿ ಹಾಗೂ ಶಾಸಕ ವಿವೇಕ್ ಗುಪ್ತಾ ಸಮ್ಮುಖದಲ್ಲಿ ಕೃಷ್ಣ ಕಲ್ಯಾಣಿ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ. ಕಲ್ಯಾಣಿ ಕೃಷ್ಣ ಈ ತಿಂಗಳ ಆರಂಭದಲ್ಲಿ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ್ದರು.
ಬಿಜೆಪಿಗೆ ರಾಜೀನಾಮೆ ನೀಡಿದ ಬಳಿಕ ಕಲ್ಯಾಣಿ ಕೃಷ್ಣ ಟಿಎಂಸಿ ಸೇರ್ಪಡೆಯಾಗಲಿದ್ದಾರೆ ಎಂಬ ವಿಚಾರವಾಗಿ ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು. ಇಂದು ಊಹಾಪೋಹಗಳಿಗೆ ತೆರೆ ಎಳೆದಿರುವ ಕೃಷ್ಣ ಕಲ್ಯಾಣಿ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಬಳಿಕ ಬಿಜೆಪಿಯಿಂದ ಐವರು ಶಾಸಕರು ಟಿಎಂಸಿಗೆ ಸೇರ್ಪಡೆಯಾದಂತಾಗಿದೆ.
ಟಿಎಂಸಿ ಸೇರ್ಪಡೆ ಬಳಿಕ ಮಾತನಾಡಿದ ಕೃಷ್ಣ ಕಲ್ಯಾಣಿ, ಬಿಜೆಪಿಯಲ್ಲಿ ಒಳ್ಳೆಯ ಕೆಲಸಗಳಿಗೆ ಮಹತ್ವ ನೀಡುವುದಿಲ್ಲ. ಅಲ್ಲಿ ಯಾವಾಗಲೂ ಷಡ್ಯಂತ್ರ ರಚಿಸಲಾಗುತ್ತೆ. ಷಡ್ಯಂತ್ರದ ಅಸ್ತ್ರ ಬಳಸಿ ಯುದ್ಧ ಗೆಲ್ಲಲು ಸಾಧ್ಯವಿಲ್ಲ. ವಿಕಾಸದಿಂದ ಮಾತ್ರ ಜನತೆಯ ಹೃದಯವನ್ನು ಗೆಲ್ಲಲು ಸಾಧ್ಯ. ನೋಟು ಅಮಾನ್ಯೀಕರಣದ ಬಳಿಕ ಅನೇಕರ ಕೈಯಲ್ಲಿ ಖರ್ಚಿಗೆ ಕಾಸು ಇರಲಿಲ್ಲ. ಆದರೆ ಮಮತಾ ಬ್ಯಾನರ್ಜಿ ವಿವಿಧ ಯೋಜನೆಗಳ ಮೂಲಕ ಜನತೆಗೆ ಸಹಕಾರ ನೀಡುತ್ತಿದ್ದಾರೆ. ಹೀಗಾಗಿ ನಾನು ಟಿಎಂಸಿ ಸೇರ್ಪಡೆಯಾಗಿದ್ದೇನೆ ಎಂದು ಹೇಳಿದ್ರು.