ಪ್ರೀತಿಯಲ್ಲಿ ಅಂತರ ಹೆಚ್ಚಾಗುತ್ತಿದೆ ಎಂದು ಭಾವಿಸಿದ ಯುವತಿಯೊಬ್ಬಳು ತನ್ನ ಬಾಯ್ಫ್ರೆಂಡ್ ಮೇಲೆ ಫೈರಿಂಗ್ ನಡೆಸಿದ ಶಾಕಿಂಗ್ ಘಟನೆಯು ಪಶ್ಚಿಮ ಬಂಗಾಳದ ವರ್ಧಮಾನ್ ಎಂಬಲ್ಲಿ ನಡೆದಿದೆ. 22 ವರ್ಷದ ಯುವತಿ ಕಳೆದ ನಾಲ್ಕು ವರ್ಷಗಳಿಂದ ಈತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಆತನಿಗೆ ಚುಂಬಿಸಿ ಬಳಿಕ ಇಬ್ಬರೂ ಸೇರಿ ಸಿಗರೇಟ್ ಸೇದಿದ್ದಾರೆ. ಇದಾದ ಬಳಿಕ ಆತನ ಮೇಲೆ ಯುವತಿ ಫೈರಿಂಗ್ ನಡೆಸಿದ್ದಾಳೆ ಎಂದು ತಿಳಿದುಬಂದಿದೆ.
ಬಾಯ್ಫ್ರೆಂಡ್ ಕೂಡ 22 ವರ್ಷದವನಾಗಿದ್ದು ಬುಲೆಟ್ ಆತನ ಹೊಟ್ಟೆ ಭಾಗದಲ್ಲಿ ತರಚಿದೆ. ಹೀಗಾಗಿ ಆತನ ಬದುಕುಳಿದಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಕಾಟ್ವಾ ಪೊಲೀಸ್ ಠಾಣೆಯಲ್ಲಿ ಕೇಶಿಯಾ ಎಂಬ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಬಾಯ್ಫ್ರೆಂಡ್ ನೀಡಿದ ದೂರು ಆಧರಿಸಿದ ಯುವತಿಯನ್ನು ಬಂಧಿಸಲಾಗಿದೆ.
ಭೇಟಿಯಾಗಬೇಕೆಂದು ಹೇಳಿದ್ದ ಯುವತಿಯು ಆತನನ್ನು ಹತ್ತಿರದ ಸರ್ಕಸ್ ಗ್ರೌಂಡ್ಗೆ ಕರೆಸಿದ್ದಳು. ಅಲ್ಲಿಗೆ ಬಂದ ಬಾಯ್ಫ್ರೆಂಡ್ನ್ನು ಆಲಂಗಿಸಿಕೊಂಡು ಬಳಿಕ ಆತನಿಗೆ ಮುತ್ತನ್ನು ನೀಡಿದ್ದಾಳೆ. ಇದಾದ ಬಳಿಕ ಇಬ್ಬರೂ ಸಿಗರೇಟ್ ಸೇದಿದ್ದಾರೆ. ಇದ್ದಕ್ಕಿದ್ದಂತೆ ಗನ್ ಹೊರಗೆ ತೆಗೆದ ಯುವತಿಯು ಆತನ ಮೇಲೆ ಫೈರಿಂಗ್ ನಡೆಸಿದ್ದಾಳೆ. ಆದರೆ ಆ ಬುಲೆಟ್ ಕೇವಲ ವ್ಯಕ್ತಿಯ ಹೊಟ್ಟೆ ಭಾಗವನ್ನು ತರಚಿದೆ. ಕೂಡಲೇ ಯುವತಿ ಸ್ಥಳದಿಂದ ಎಸ್ಕೇಪ್ ಆಗಿದ್ದಾಳೆ. ಬಳಿಕ ಆಕೆಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಾಥಮಿಕ ತನಿಖೆಯ ವೇಳೆಯಲ್ಲಿ ಕೆಲ ತಿಂಗಳಿನಿಂದ ಇಬ್ಬರ ನಡುವೆ ಅಂತರ ಹೆಚ್ಚಾಗುತ್ತಿತ್ತು. ಹೀಗಾಗಿ ತಾನು ಈ ರೀತಿ ಮಾಡಿದ್ದಾಗಿ ಯುವತಿ ಹೇಳಿದ್ದಾಳೆ ಎನ್ನಲಾಗಿದೆ.