ಕೇಂದ್ರ ಸರ್ಕಾರವು ಏರ್ ಇಂಡಿಯಾವನ್ನು ಜನವರಿ 27 ರಂದು ಅಧಿಕೃತವಾಗಿ ಟಾಟಾ ಗ್ರೂಪ್‌ಗೆ ಹಸ್ತಾಂತರಿಸುವ ಮೂಲಕ ಸುಮಾರು 69 ವರ್ಷಗಳ ನಂತರ ರಾಷ್ಟ್ರೀಯ ವಾಹಕವನ್ನು ಅದರ ಅಸಲಿ ಮಾತೃಸಂಸ್ಥೆಯ ಮಡಿಲಿಗೆ ಸೇರಿಸಿದೆ.
ಟಾಟಾ ಸಮೂಹದ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಔಪಚಾರಿಕ ಹಸ್ತಾಂತರ ಸಮಾರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸರ್ಕಾರದ ಪ್ರಮುಖ ಅಧಿಕಾರಿಗಳನ್ನು ಭೇಟಿ ಮಾಡಲು ರಾಷ್ಟ್ರ ರಾಜಧಾನಿಯಲ್ಲಿದ್ದರು. ಈ ಪ್ರಕ್ರಿಯೆಯು ಟಾಟಾ ನಾಮನಿರ್ದೇಶಿತರೊಂದಿಗೆ ಏರ್ ಇಂಡಿಯಾದ ಹೊಸ ಮಂಡಳಿಯ ಸಂವಿಧಾನವನ್ನು ಒಳಗೊಂಡಿತ್ತು.
ಆಡಿ ಬೆಳೆದ ರಕ್ಷಣಾ ಕೇಂದ್ರಕ್ಕೆ ಮಕ್ಕಳನ್ನು ಕರೆತಂದ ಗಜರಾಣಿ
ಟಾಟಾ ಸಮೂಹಕ್ಕೆ ಏರ್ ಇಂಡಿಯಾದ ಮಾರಾಟವನ್ನು ಕಳೆದ ವರ್ಷ ಅಕ್ಟೋಬರ್ 8 ರಂದು ಘೋಷಿಸಲಾಯಿತು. ಟಾಟಾ ಸಮೂಹಕ್ಕೆ ಏರ್‌ಲೈನ್‌ನಲ್ಲಿ ತನ್ನ 100 ಪ್ರತಿಶತ ಪಾಲನ್ನು ಮಾರಾಟ ಮಾಡಲು ಸರ್ಕಾರದ ಅಧಿಕೃತ ಪತ್ರವೊಂದರ ಮೂಲಕ ಇಚ್ಛೆಯನ್ನು ದೃಢೀಕರಿಸಿತು. ಅಕ್ಟೋಬರ್ 25 ರಂದು, ಈ ಸಂಬಂಧ ಕೇಂದ್ರವು ಷೇರು ಖರೀದಿ ಒಪ್ಪಂದಕ್ಕೆ (SPA) ಸಹಿ ಹಾಕಿತು.
ಈ ವೇಳೆ ಭಾರೀ ಸಂತಸಗೊಂಡಿದ್ದ ರತನ್ ಟಾಟಾ, ಅಕ್ಟೋಬರ್ 8 ರಂದು ಟ್ವಿಟರ್‌ನಲ್ಲಿ ‘ವೆಲ್‌ಕಮ್ ಬ್ಯಾಕ್, ಏರ್ ಇಂಡಿಯಾ’ ಎಂದು ಹೇಳಿದ್ದರು.
ಜಹಾಂಗೀರ್ ರತನ್ಜಿ ದಾದಾಭೋಯ್ (ಜೆಆರ್‌ಡಿ) ಟಾಟಾ ಅವರು 1932 ರಲ್ಲಿ ವಿಮಾನಯಾನ ಸಂಸ್ಥೆ ಸ್ಥಾಪಿಸಿದ್ದು, ಅದನ್ನು ಟಾಟಾ ಏರ್ಲೈನ್ಸ್ ಎಂದು ಕರೆಯಲಾಯಿತು. 1946 ರಲ್ಲಿ, ಟಾಟಾ ಸನ್ಸ್‌ನ ವಾಯುಯಾನ ವಿಭಾಗವನ್ನು ಏರ್ ಇಂಡಿಯಾ ಎಂದು ನಾಮಕರಣ ಮಾಡಲಾಯಿತು. ಅದೇ ವರ್ಷದಲ್ಲಿ, ಏರ್ಲೈನ್ ತನ್ನ ಜನಪ್ರಿಯ ‘ಮಹಾರಾಜ’ ಮ್ಯಾಸ್ಕಾಟ್ ಅನ್ನು ಅಳವಡಿಸಿಕೊಂಡಿದೆ. 1948 ರಲ್ಲಿ ಏರ್ ಇಂಡಿಯಾ ಇಂಟರ್‌ನ್ಯಾಶನಲ್ ಅನ್ನು ಯುರೋಪ್‌ಗೆ ವಿಮಾನಗಳನ್ನು ಹಾರಿಬಿಡುವುದರೊಂದಿಗೆ ಆರಂಭಿಸಲಾಯಿತು.
ಈ ಅಂತರರಾಷ್ಟ್ರೀಯ ವಿಮಾನ ಸೇವೆಯು ಭಾರತದ ಮೊದಲ ಸಾರ್ವಜನಿಕ-ಖಾಸಗಿ ಸಹಭಾಗಿತ್ವಗಳಲ್ಲಿ ಒಂದಾಗಿದೆ, ಸರ್ಕಾರವು 49 ಪ್ರತಿಶತವನ್ನು ಹೊಂದಿದ್ದು, ಟಾಟಾ 25 ಪ್ರತಿಶತವನ್ನು ಇಟ್ಟುಕೊಂಡಿದ್ದರು. ಮಿಕ್ಕ 25% ಪಾಲನ್ನು ಸಾರ್ವಜನಿಕ ಸ್ವಾಮ್ಯತ್ವಕ್ಕೆ ಬಿಡಲಾಗಿತ್ತು.
1953ರಲ್ಲಿ ಏರ್ ಇಂಡಿಯಾವನ್ನು ರಾಷ್ಟ್ರೀಕರಣಗೊಳಿಸಲಾಯಿತು ಮತ್ತು ಎರಡು ಭಾಗಗಳಾಗಿ ವಿಭಜಿಸಲಾಯಿತು – ದೇಶೀಯ ವಿಮಾನಯಾನ ಮತ್ತು ಅಂತರರಾಷ್ಟ್ರೀಯ ವಾಹಕ. ಬ್ರಿಟೀಷ್ ವಸಾಹತು ನಂತರದ ಕಾಲದ ದೇಶದ ಮೊದಲ ಜವಾಹರಲಾಲ್ ನೆಹರೂ ಅವರು ಏರ್ ಇಂಡಿಯಾವನ್ನು ರಾಷ್ಟ್ರೀಕರಣಗೊಳಿಸಿದಾಗ, ಜೆಆರ್‌ಡಿ ಅದರ ವಿರುದ್ಧ ತೀವ್ರವಾಗಿ ಹೋರಾಡಿದ್ದರು.
“ಭಾರತೀಯ ವಿಮಾನಯಾನ ಉದ್ಯಮದ ಪ್ರವರ್ತಕ ಜೆಆರ್‌ಡಿ ಅವರು ಎರಡೂ ಘಟಕಗಳಿಗೆ ಮುಖ್ಯಸ್ಥರಾಗಿದ್ದಾಗ ಟಾಟಾ ಗ್ರೂಪ್‌ಗಿಂತ ಏರ್ ಇಂಡಿಯಾದ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಿದ್ದರು ಎಂದು ಟಾಟಾ ಸಮೂಹದ ಕಾರ್ಯನಿರ್ವಾಹಕರು ಖಾಸಗಿಯಾಗಿ ದೂರು ನೀಡುತ್ತಿದ್ದರು ಎಂದು ಹೇಳಲಾಗುತ್ತದೆ. ಏರ್ ಇಂಡಿಯಾವನ್ನು ಅಧ್ಯಕ್ಷರಾಗಿ ಮುನ್ನಡೆಸುವುದು ಎಂದಿಗೂ ಕೇವಲ ಕೆಲಸವಾಗಿರಲಿಲ್ಲ ಆದರೆ ಅವರಿಗೆ ಪ್ರೀತಿಯ ಕೆಲಸವಾಗಿತ್ತು,” ಎಂದು ಏರ್ ಇಂಡಿಯಾದ ಸಂಸ್ಥಾಪಕನ ಉತ್ಸಾಹದ ಬಗ್ಗೆ ಪಿಟಿಐ ವರದಿ ಮಾಡಿದೆ.
“ಸಮೂಹದ ಪರಂಪರೆಯ ಗೌರವವನ್ನು ಪರಿಗಣಿಸಿ, ಏರ್ ಇಂಡಿಯಾವನ್ನು ಮನೆಗೆ ಮರಳಿ ಸ್ವಾಗತಿಸಲು ಬಹಳ ದುಡ್ಡು (18,000 ಕೋಟಿ ರೂ.) ವ್ಯಯಿಸಿರುವುದು ಅಚ್ಚರಿಯ ಸಂಗತಿಯೇನಲ್ಲ. 1932 ರಲ್ಲಿ ಟಾಟಾ ಏರ್‌ಲೈನ್ಸ್ ಮತ್ತು ಏರ್ ಇಂಡಿಯಾದ ಪೂರ್ವಗಾಮಿಯಾದ ಟಾಟಾ ಏವಿಯೇಷನ್ ಸೇವೆಯನ್ನು ಪ್ರಾರಂಭಿಸಲು 2 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಲು ಹಿಂದೆ ಮುಂದೆ ನೋಡದ ಗುಂಪು ಇದು. ಜೆಆರ್‌ಡಿ ಪುಸ್ಮೋತ್ ವಿಮಾನವನ್ನು ಮುನ್ನಡೆಸುವ ಮೂಲಕ ಅಕ್ಟೋಬರ್ 1932 ರಲ್ಲಿ ಕರಾಚಿಯಿಂದ ಬಾಂಬೆಗೆ ಮೊದಲ ಏರ್‌ಮೇಲ್ ಸೇವೆಯ ಹಾರಾಟದಿಂದ ಹಿಡಿದು 89 ವರ್ಷಗಳ ನಂತರ ಏರ್ ಇಂಡಿಯಾದ ಸ್ವಾಮ್ಯತ್ವ ಮರಳಿ ಪಡೆಯುವವರೆಗೂ ಸಮೂಹವು ಸಾಕಷ್ಟು ಏರಿಳಿತಗಳನ್ನು ಕಂಡಿದೆ,” ಎಂದು ಪಿಟಿಐ ವಿವರಿಸಿದೆ.
“ಇಂದು ನಮ್ಮ ನಡುವೆ ಜೆಆರ್‌ಡಿ ಟಾಟಾ ಇದ್ದಿದ್ದರೆ ಭಾರೀ ಖುಷಿ ಪಡುತ್ತಿದ್ದರು,” ಎಂದು ಪತ್ರವೊಂದರಲ್ಲಿ ಬರೆದಿರುವ ರತನ್ ಟಾಟಾ, ಅವರ ನಾಯಕತ್ವದಲ್ಲಿ ವಿಮಾನಯಾನ ವಾಹಕವು ಜಗತ್ತಿನ ಅತ್ಯಂತ ಶ್ರೇಷ್ಠ ವಿಮಾನಯಾನ ಕಂಪನಿಗಳಲ್ಲಿ ಒಂದು ಹೆಸರು ಮಾಡಿದ್ದ ವೈಭವದ ಹೆಸರನ್ನು ಮತ್ತೊಮ್ಮೆ ಪಡೆಯಲು ಯತ್ನಿಸುವುದಾಗಿ ತಿಳಿಸಿದ್ದು, ನಗರಿಕ ವಿಮಾನಯಾನ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಮುಕ್ತ ವಾತಾವರಣ ನಿರ್ಮಾಣ ಮಾಡಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.