ತನ್ನ ಲಿವ್ ಇನ್ ರಿಲೇಷನ್ ಶಿಪ್ ಪಾಲುದಾರೆ ಶ್ರದ್ಧಾ ವಾಕರ್ ಅವರನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾ, ಜೂನ್‌ನಲ್ಲಿ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ತನ್ನ ಫ್ಲಾಟ್‌ನಿಂದ ದೆಹಲಿಗೆ 37 ಬಾಕ್ಸ್‌ಗಳಲ್ಲಿ ವಸ್ತುಗಳನ್ನು ಸ್ಥಳಾಂತರಿಸಿದ್ದ. ಇದಕ್ಕಾಗಿ 20,000 ರೂ. ಪಾವತಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ರಾಷ್ಟ್ರ ರಾಜಧಾನಿಗೆ ತೆರಳುವ ಮೊದಲು ಪಾಲ್ಘರ್‌ನ ವಸೈ ಪ್ರದೇಶದಲ್ಲಿರುವ ತಮ್ಮ ಮನೆಯಿಂದ ವಸ್ತುಗಳನ್ನು ಸ್ಥಳಾಂತರಿಸಲು ಯಾರು ಹಣ ಪಾವತಿಸುತ್ತಾರೆ ಎಂಬ ಬಗ್ಗೆ ತಾನು ಮತ್ತು ಶ್ರದ್ಧಾ ಜಗಳವಾಡಿದ್ದೇವೆ ಎಂದು ಅಫ್ತಾಬ್ ದೆಹಲಿ ಪೊಲೀಸರಿಗೆ ತಿಳಿಸಿದ್ದಾನೆ.
ಗುಡ್‌ಲಕ್ ಪ್ಯಾಕರ್ಸ್ ಮತ್ತು ಮೂವರ್ಸ್ ಕಂಪನಿ ಮೂಲಕ ಜೂನ್‌ನಲ್ಲಿ ಪೀಠೋಪಕರಣಗಳು ಮತ್ತು ಇತರ ಗೃಹೋಪಯೋಗಿ ವಸ್ತುಗಳನ್ನು ಸಾಗಿಸಲು 20,000 ರೂ. ಹಣವನ್ನ ಯಾರ ಖಾತೆಯಿಂದ ಪಾವತಿಸಲಾಗಿದೆ ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿ ಪೊಲೀಸ್ ತಂಡವು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಪ್ಯಾಕೇಜಿಂಗ್ ಕಂಪನಿಯ ಉದ್ಯೋಗಿಯ ಹೇಳಿಕೆಯನ್ನು ಭಾನುವಾರ ದಾಖಲಿಸಿದ ನಂತರ, ಅಫ್ತಾಬ್ 37 ಬಾಕ್ಸ್ ಗಳಲ್ಲಿ ಸಾಮಾನುಗಳನ್ನು ವಸಾಯಿಯ ಎವರ್‌ಶೈನ್ ಸಿಟಿಯಲ್ಲಿರುವ ವೈಟ್ ಹಿಲ್ಸ್ ಸೊಸೈಟಿಯ ತನ್ನ ಫ್ಲಾಟ್‌ನಿಂದ ದೆಹಲಿ ನಿವಾಸಕ್ಕೆ ಸ್ಥಳಾಂತರಿಸಿದ್ದಾನೆ ಎಂದು ಬೆಳಕಿಗೆ ಬಂದಿದೆ.
ಇದರೊಂದಿಗೆ 2021 ರಲ್ಲಿ ಶ್ರದ್ಧಾ ಮತ್ತು ಅಫ್ತಾಬ್ ತಂಗಿದ್ದ ಮನೆಯ ಮಾಲೀಕರ ಹೇಳಿಕೆ ಮತ್ತು ಆರೋಪಿಯ ಕುಟುಂಬ ಸದಸ್ಯರು ಹದಿನೈದು ದಿನಗಳ ಹಿಂದಿನವರೆಗೆ ತಂಗಿದ್ದ ಮುಂಬೈ ಸಮೀಪದ ಮೀರಾ ರೋಡ್ ಪ್ರದೇಶದ ಫ್ಲಾಟ್‌ನ ಮಾಲೀಕರ ಹೇಳಿಕೆಯನ್ನು ಪೊಲೀಸರು ಭಾನುವಾರ ದಾಖಲಿಸಿಕೊಂಡಿದ್ದಾರೆ.
ಈ ವರ್ಷದ ಮೇ ತಿಂಗಳಲ್ಲಿ ದೆಹಲಿಯಲ್ಲಿ ಶ್ರದ್ಧಾ (27) ಎಂಬಾಕೆಯನ್ನು ಅಫ್ತಾಬ್ ಹತ್ಯೆಗೈದಿದ್ದ. ಅವಳ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಅವುಗಳನ್ನು ಹಲವಾರು ದಿನಗಳವರೆಗೆ ವಿಲೇವಾರಿ ಮಾಡುವ ಮೊದಲು ಅವುಗಳನ್ನು ಸುಮಾರು ಮೂರು ವಾರಗಳ ಕಾಲ ತನ್ನ ಫ್ಲಾಟ್‌ನ ಫ್ರಿಜ್‌ನಲ್ಲಿ ಇಟ್ಟಿದ್ದನು. ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.