ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿ, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ, ಕೇರಳ ಮತ್ತು ಗುಜರಾತ್ ರಾಜ್ಯದ ಕೋವಿಡ್ ಪರಿಸ್ಥಿತಿ ಕಳವಳಕಾರಿಯಾಗಿದೆ. ಭಾರತದ 300 ಜಿಲ್ಲೆಗಳಲ್ಲಿ ವಾರಕ್ಕೆ ಶೇಕಡಾ 5 ಕ್ಕಿಂತ ಹೆಚ್ಚು ಪಾಸಿಟಿವಿಟಿ ರೇಟ್ ದಾಖಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.
ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್, ಭಾರತದಲ್ಲಿ ಕೊರೋನಾ ಸೋಂಕುಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಡಿಸೆಂಬರ್ 30 ರಂದು ಶೇಕಡಾ 1.1 % ಇದ್ದ ಪಾಸಿಟಿವಿಟಿ ರೇಟ್ ಜನವರಿ 12ಕ್ಕೆ 11.05% ಗೆ ಏರಿದೆ. ಈ ಸಮಯದಲ್ಲಿ, ಕೋವಿಡ್ ಪ್ರಕರಣಗಳು ಜಾಗತಿಕವಾಗಿ ಏರಿಕೆಯಾಗುತ್ತಿದ್ದು, ಜನವರಿ 10 ರಂದು ಈವರೆಗಿನ ದಾಖಲೆ ಏರಿಕೆ ಅಂದರೆ ಒಂದು ದಿನದಲ್ಲಿ ವಿಶ್ವಾದ್ಯಂತ 31.59 ಲಕ್ಷ ಪ್ರಕರಣಗಳು ವರದಿಯಾಗಿವೆ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ, ಭಾರತದಲ್ಲಿನ 300 ಜಿಲ್ಲೆಗಳ ವಾರದ ಪಾಸಿಟಿವಿಟಿ ದರ, 5 % ಗಿಂತ ಹೆಚ್ಚು ವರದಿ ಆಗುತ್ತಿದೆ. 19 ರಾಜ್ಯಗಳಲ್ಲಿ 10,000 ಕ್ಕೂ ಹೆಚ್ಚು ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿ, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ, ಕೇರಳ ಮತ್ತು ಗುಜರಾತ್ ನಲ್ಲಿ ಆಗುತ್ತಿರೊ ಕೋವಿಡ್ ಪ್ರಕರಣಗಳ ಹೆಚ್ಚಳದಿಂದ ಇವುಗಳನ್ನ ಸ್ಟೇಟ್ಸ್ ಆಫ್ ಕನ್ಸರ್ನ್ ಎಂದು ಪರಿಗಣಿಸಲಾಗಿದೆ ಎಂದು ಲವ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಈ ವೇಳೆ ಆತಂಕ ಪಡುವ ಅಗತ್ಯವಿಲ್ಲ, ಮುನ್ನೆಚ್ಚರಿಕೆ ವಹಿಸಿ ಎಂದಿರುವ ಅಗರ್ವಾಲ್ ಲಸಿಕೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ.