ವಾರದ ಹಿಂದಷ್ಟೇ ಕರ್ನಾಟಕದಲ್ಲಿ ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದ 66 ವರ್ಷದ ದಕ್ಷಿಣ ಆಫ್ರಿಕಾದ ಪ್ರಜೆ ಭಾರತದಿಂದ ನಿರ್ಗಮಿಸಿದ್ದು ಆತಂಕಕ್ಕೆ ಕಾರಣವಾಗಿದೆ.
ನವೆಂಬರ್ 20ರಂದು ಬೆಂಗಳೂರಿಗೆ ಆಗಮಿಸಿದ್ದ ದಕ್ಷಿಣ ಆಫ್ರಿಕಾದ ಪ್ರಜೆಯು ಕೊರೊನಾ ಸೋಂಕಿಗೆ ಒಳಗಾಗಿದ್ದರು. ಕಳೆದ ವಾರವಷ್ಟೇ ಖಾಸಗಿ ಲ್ಯಾಬ್ನಿಂದ ತಯಾರಿಸಲಾದ ನೆಗೆಟಿವ್ ವರದಿ ತೋರಿಸುವ ಮೂಲಕ ದಕ್ಷಿಣ ಆಫ್ರಿಕಾ ಪ್ರಜೆಯು ದುಬೈಗೆ ಪ್ರಯಾಣ ಬೆಳೆಸಿದ್ದಾರೆ.
ಕೊರೊನಾ ವೈರಸ್ ಸೋಂಕಿಗೆ ಒಳಗಾದ ಬಳಿಕ ದಕ್ಷಿಣ ಆಫ್ರಿಕಾದ ಪ್ರಜೆಯು ಹೇಗೆ ನೆಗೆಟಿವ್ ವರದಿ ಪಡೆದರು ಹಾಗೂ ಅವರ ಜಿನೋಮಿಕ್ ವರದಿಗೆ ಕಾಯುತ್ತಿರುವ ನಡುವೆಯೇ ವಿದೇಶಕ್ಕೆ ಅದು ಹೇಗೆ ಪ್ರಯಾಣ ಬೆಳೆಸಿದ್ರು ಎಂಬುದರ ಬಗ್ಗೆ ತನಿಖೆಗೆ ರಾಜ್ಯ ಸರ್ಕಾರ ಆದೇಶ ನೀಡಿದೆ.
66 ವರ್ಷದ ವ್ಯಕ್ತಿಯು ಹೋಟೆಲ್ ಒಂದರಲ್ಲಿ ಐಸೋಲೇಟ್ ಆಗಿದ್ದರು. ಆದರೆ ಈಗ ಅವರು ಹೋಟೆಲ್ನಿಂದ ತೆರಳಿದ್ದಾರೆ. ಮೊದಲು ಅವರ ಕೋವಿಡ್ ವರದಿಯು ಪಾಸಿಟಿವ್ ಬಂದಿತ್ತು. ಬಳಿಕ ವರದಿ ನೆಗೆಟಿವ್ ಬಂದಿದೆ. ನೆಗೆಟಿವ್ ವರದಿಯು ಸರಿಯಾಗಿದೆಯೇ ಅಥವಾ ಏನಾದರೂ ಅಕ್ರಮ ನಡೆದಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸಲು ಪೊಲೀಸ್ ಕಮಿಷನರ್ಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಈ ಸಂಬಂಧ ಉನ್ನತ ಮಟ್ಟದ ಸಭೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ, ವಿದೇಶಿ ಪ್ರಜೆಯ ಕೊರೊನಾ ವರದಿಗಳ ಬಗ್ಗೆ ಈಗಲೂ ಅನುಮಾನವಿದೆ. ಹೀಗಾಗಿ ನೆಗೆಟಿವ್ ವರದಿ ನೀಡಿದ ಪ್ರಯೋಗಾಲಯದ ಬಗ್ಗೆ ತನಿಖೆಗೆ ಆದೇಶಿಸಿದಲಾಗಿದೆ. ಬಿಬಿಎಂಪಿ ಆಯುಕ್ತರು ಈ ಸಂಬಂಧ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದ್ದಾರೆ.