ಭವಾನಿ ಪಟ್ನಾ: ಒಡಿಶಾದ ಭವಾನಿ ಪಟ್ನಾದಲ್ಲಿ ನಡೆದ ವಿಲಕ್ಷಣ ವಿವಾಹ ಘಟನೆಯೊಂದರಲ್ಲಿ ಮದುವೆ ಮನೆಯಿಂದ ವಧು ಓಡಿ ಹೋಗಿದ್ದಾಳೆ. ಪ್ರಿಯಕರನೊಂದಿಗೆ ವಧು ಪರಾರಿಯಾಗಿದ್ದರಿಂದ ಆಕೆಯ 15 ವರ್ಷದ ತಂಗಿಯನ್ನು ವರ ಮದುವೆಯಾಗಿದ್ದಾನೆ.
ಒಡಿಶಾದ ಕಲಹಂಡಿ ಜಿಲ್ಲೆಯ ಮಾಳ್ವಾಡ ಗ್ರಾಮದ ವಧು ಮಂಗಳವಾರ ಸಂಜೆ ತನ್ನ ಗೆಳೆಯನೊಂದಿಗೆ ಓಡಿ ಹೋಗಿದ್ದಾಳೆ. ಸಂಬಂಧಿಕರೆಲ್ಲ ಸೇರಿ ವಧುವಿನ 15 ವರ್ಷದ ತಂಗಿಯ ಜೊತೆಗೆ 26 ವರ್ಷದ ವರನ ಮದುವೆ ಮಾಡಿದ್ದಾರೆ. ಆದರೆ, ಬಾಲ್ಯವಿವಾಹ ನಿಷೇಧವಿರುವುದರಿಂದ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಲಾಗಿದೆ. ಹತ್ತನೇ ತರಗತಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಬಾಲಕಿಯನ್ನು ರಕ್ಷಿಸಲಾಗಿದೆ ಎಂದು ಕಲಹಂಡಿ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಕಿಯ ಮತ್ತು ವರನ ಕುಟುಂಬದವರಿಗೆ ಬಾಲ್ಯವಿವಾಹ ಕಾನೂನುಬಾಹಿರ ಎಂಬುದರ ಬಗ್ಗೆ ತಿಳಿಹೇಳಲಾಗಿದೆ. ಹುಡುಗಿ ಮದುವೆಯಾಗುವ ವಯಸ್ಸಿನವಳಾಗಿಲ್ಲ ಎಂದು ತಿಳಿಸಿ ಆಕೆಯನ್ನೂ ರಕ್ಷಿಸಲಾಗಿದೆ. ಪೋಷಕರ ಮನೆಯಲ್ಲೇ ಉಳಿದುಕೊಂಡು ಓದಿ ಪರೀಕ್ಷೆ ಬರೆಯುವುದಾಗಿ ಬಾಲಕಿ ಹೇಳಿದ್ದು, ಎರಡು ಕುಟುಂಬದವರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲಾಗಿದೆ. ಆಕೆಗೆ 18 ವರ್ಷ ತುಂಬುವ ಮೊದಲು ಮದುವೆ ಮಾಡದಿರಲು ಮನೆಯವರು ಒಪ್ಪಿಕೊಂಡಿದ್ದಾರೆ ಎಂದು ಕಲಹಂಡಿ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಸುಕಂತಿ ಬೆಹೆರಾ ತಿಳಿಸಿದ್ದಾರೆ.
ವಧು ಮದುವೆ ಮನೆಯಿಂದ ಓಡಿಹೋದ ನಂತರ ಕಿರಿಯ ಮಗಳೊಂದಿಗೆ ಮದುವೆ ಮಾಡಲು ಬಾಲಕಿಯ ತಂದೆಗೆ ಒತ್ತಡವಿತ್ತು. ಹೀಗಾಗಿ ಮದುವೆ ಮಾಡಲಾಗಿದೆ ಎಂದು ಹೇಳಲಾಗಿದೆ.