ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ 20 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಲೋಕಸಭಾ ಚುನಾವಣಾ ಸಿದ್ಧತೆಗಳನ್ನು ಮತ್ತಷ್ಟು ವ್ಯಾಪಕವಾಗಿ ಕೈಗೊಳ್ಳುವ ಸಂಬಂಧ ನಡೆದ ಸರ್ಕಾರದ ಸಚಿವರು, ಹಿರಿಯ ಶಾಸಕರು ಮತ್ತು ಸಂಭಾವ್ಯ ಅಭ್ಯರ್ಥಿಗಳ ಸಭೆಯಲ್ಲಿ ಪಾಲ್ಗೊಂಡು ಸಿಎಂ ಮಾತನಾಡಿದರು.
ನಮಗೆ ಲೋಕಸಭೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಉತ್ತಮ ಅವಕಾಶವಿದೆ. ಹೀಗಾಗಿ ಜನರ ನಡುವೆ ಗಟ್ಟಿಯಾಗಿ ನಿಂತು ಸಮರ್ಥವಾಗಿ ಚುನಾವಣೆ ಎದುರಿಸಿ, ಗೆದ್ದು ಬನ್ನಿ. ವಿಧಾನಸಭೆ ಚುನಾವಣೆಯಲ್ಲಿ ನಾವು 136 ಸ್ಥಾನ ಗೆಲ್ಲುತ್ತೀವಿ ಎಂದು ಯಾರೂ ಹೇಳಿರಲಿಲ್ಲ. ಆದರೆ ನನಗೆ ವೈಯುಕ್ತಿಕವಾಗಿ ಜನರ ಭಾವನೆ ಗೊತ್ತಿತ್ತು. ಹೀಗಾಗಿ 135 ಗೆದ್ದೇ ಗೆಲ್ತೀವಿ ಎಂದು ನಾವು ಧೈರ್ಯವಾಗಿ ಚುನಾವಣೆಗೆ ಮೊದಲೇ ಹೇಳಿದ್ದೆವು. ಲೋಕಸಭೆಯಲ್ಲೂ ನಮಗೆ 20 ಸ್ಥಾನದವರೆಗೂ ಖಚಿತವಾಗಿ ಗೆಲ್ಲುವ ಅವಕಾಶಗಳಿವೆ. ರಾಜ್ಯದಲ್ಲಿ ಮಾತ್ರವಲ್ಲ, ದೇಶದ ನಾನಾ ಕಡೆಗಳಲ್ಲಿ
ಬಿಜೆಪಿ ವಿರುದ್ಧವಾದ ಅಲೆ ತೀವ್ರವಾಗಿದೆ. ದೇಶದ ಭವಿಷ್ಯಕ್ಕೆ ಈ ಸರ್ಕಾರ ಬದಲಾಗಲೇಬೇಕಿದೆ ಎನ್ನುವ ಅಭಿಪ್ರಾಯ ವಿದ್ಯಾವಂತ ಸಮುದಾಯದಲ್ಲಿದೆ.
ಹೀಗಾಗಿ ನಾವು 20 ಸ್ಥಾನ ಗೆಲ್ಲಬಹುದು. ವಾಸ್ತವ ಚಿತ್ರಣ, ಒಳನೋಟ ನಮಗೆ ಗೊತ್ತಾಗಿದೆ. ನಮ್ಮ ಗ್ಯಾರಂಟಿಗಳ ಬಗ್ಗೆ ನಾಡಿನ ಜನತೆಗೆ, ನಮ್ಮ ಹೆಣ್ಣು ಮಕ್ಕಳಿಗೆ, ತಾಯಂದಿರಿಗೆ ಧನ್ಯತೆ ಇದೆ. ಇವರ್ಯಾರೂ ನಮ್ಮ ಕೈ ಬಿಡಲ್ಲ. ಪ್ರತೀ ದಿನ ಪ್ರತೀ ತಿಂಗಳು ನಾಡಿನ ಮನೆ ಮನೆಗೆ ಸರ್ಕಾರದ ಗ್ಯಾರಂಟಿಗಳ ಫಲ ಹೆಣ್ಣುಮಕ್ಕಳ ಮಡಿಲು ಸೇರುತ್ತಿದೆ. ಈ ಧನ್ಯತೆ ನಮ್ಮ ನಾಡಿನ ತಾಯಂದಿರು ಮತ್ತು ಹೆಣ್ಣು ಮಕ್ಕಳ ಹೃದಯದಲ್ಲಿದೆ. ಇವರಿಗೆ ಕೈ ಮುಗಿದು ಮತ ಕೇಳಿ, ಖಂಡಿತಾ ನಿಮ್ಮನ್ನು ಆಶೀರ್ವದಿಸುತ್ತಾರೆ. ಕೇಂದ್ರ ಸರ್ಕಾರ ರಾಜ್ಯದ ತೆರಿಗೆ ದುಡ್ಡು ಪಡೆದು ರಾಜ್ಯಕ್ಕೆ ಯಾವ ಪ್ರಮಾಣದಲ್ಲಿ ವಂಚಿಸಿದೆ ಎನ್ನುವ ನೋವು ನಮ್ಮ ನಾಡಿನ ಜನರಿಗೆ ಇದೆ, ರೈತರಿಗೆ ಇದೆ. ಕೇಂದ್ರದ ಭೀಕರ ಅನ್ಯಾಯದ ನಡುವೆಯೂ ರಾಜ್ಯ ಆರ್ಥಿಕವಾಗಿ ಪ್ರಗತಿ ಮಾಡಿರುವುದು, ಸಾಧನೆ ಆಗಿರುವುದರ ಬಗ್ಗೆ ನೇರ ಮತ್ತು ಪರೋಕ್ಷ ತೆರಿಗೆದಾರರೆಲ್ಲರನ್ನೂ ಮಾತಾಡಿಸಿ ಮನವರಿಕೆ ಮಾಡಬೇಕು. ಕೇಂದ್ರ ಸರ್ಕಾರದ ಸುಳ್ಳು, ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಅವರ ಬದುಕಿಗೆ ವಂಚಿಸುವ ಬಿಜೆಪಿ ಷಡ್ಯಂತ್ರವನ್ನು ಜನರಿಗೆ ಸಮಾಧಾನದಿಂದ ಮನವರಿಕೆ ಮಾಡಿಸಬೇಕು. ದೇಶದ ಪ್ರಜಾತಂತ್ರ ಉಳಿವಿಗೆ, ಭವಿಷ್ಯದ ಭಾರತಕ್ಕಾಗಿ ಜನ ಮೋದಿ ಸರ್ಕಾರವನ್ನು ಬದಲಾಯಿಸುತ್ತಾರೆ. ನಾವು-ನೀವು ಗಟ್ಟಿಯಾಗಿ ಜನರ ನಡುವೆ ನಿಲ್ಲೋಣ. ಕಾರ್ಯಕರ್ತರನ್ನು, ಸ್ಥಳೀಯ ಮುಖಂಡರನ್ನು ಮಾತಾಡಿಸಿ, ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಬಿಜೆಪಿಯವರು ಎಲ್ಲಾ ರೀತಿಯ ಅಧಿಕಾರ ದುರುಪಯೋಗ ಮಾಡಿ ನಮಗೆ ತೊಂದರೆ ಕೊಡುತ್ತಾರೆ. ನಾವು ಎದೆಗಾರಿಕೆಯಿಂದ ಎದುರಿಸಿ ಜನರಿಂದ ಶಕ್ತಿ ಪಡೆದುಕೊಳ್ಳಬೇಕು. ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ವೈಜ್ಞಾನಿಕವಾಗಿ ಪ್ರಚಾರ ಮಾಡಿ ಅರ್ಥಪೂರ್ಣ ವಾಗಿ ಚುನಾವಣೆ ನಡೆಸೋಣ ಎಂದು ಹೇಳಿದರು.