ನವದೆಹಲಿ: ಭಾರತದ ಜಿಡಿಪಿಯ ಮೂರನೇ ತ್ರೈಮಾಸಿಕದ ಅಂಕಿಅಂಶಗಳು ಗುರುವಾರ ಹೊರಬಂದಿವೆ. ಮೂರನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 8.4 ರಷ್ಟು ಬೆಳವಣಿಗೆ ಕಂಡಿದೆ. ಇದು ಸರ್ಕಾರದ ಅಂದಾಜಿಗಿಂತ ಉತ್ತಮವಾಗಿದೆ.
2023-24ನೇ ಸಾಲಿನಲ್ಲಿ ಭಾರತದ ಜಿಡಿಪಿ ದರ ಶೇ.7.6ರಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ. ಇದು ಸರ್ಕಾರದ ಪರಿಷ್ಕೃತ ಅಂದಾಜು ಶೇಕಡಾ 7 ಕ್ಕಿಂತ ಹೆಚ್ಚಾಗಿದೆ. ಜಿಡಿಪಿ ಅಂಕಿಅಂಶಗಳು ಹೊರಬಂದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಶ್ರಮಿಸುವುದನ್ನು ಮುಂದುವರಿಸುವುದಾಗಿ ಹೇಳಿದರು.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು, 2023-24ರ ಮೂರನೇ ತ್ರೈಮಾಸಿಕದಲ್ಲಿ 8.4% ಜಿಡಿಪಿ ಬೆಳವಣಿಗೆಯು ಭಾರತೀಯ ಆರ್ಥಿಕತೆಯ ಶಕ್ತಿ ಮತ್ತು ಅದರ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. 140 ಕೋಟಿ ಭಾರತೀಯರಿಗೆ ಉತ್ತಮ ಜೀವನ ನಡೆಸಲು ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಸಹಾಯ ಮಾಡುವ ತ್ವರಿತ ಆರ್ಥಿಕ ಬೆಳವಣಿಗೆಯನ್ನು ತರಲು ನಮ್ಮ ಪ್ರಯತ್ನಗಳು ಮುಂದುವರಿಯುತ್ತವೆ ಎಂದು ಹೇಳಿದ್ದಾರೆ.